ಚಿಕ್ಕಮಗಳೂರು : ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸುವಂತೆ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಮಂಗಳವಾರ ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಕಳಪೆ ಕಾಮಗಾರಿಯಿಂದಾಗಿ ಜಿಲ್ಲಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟಿವೆ, ಆಳುದ್ದದ ಗುಂಡಿ ಗೊಟರುಗಳಿಂದಾಗಿ ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ, ಅಫಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ ಎಂದು ದೂರಿದರು.
ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ವಾಹನ ಚಲಾಯಿಸಲಾಗದೇ ಚಾಲಕರು ಪರದಾಡುತ್ತಿದ್ದು ಈ ಹಿನ್ನೆಲೆಯಲ್ಲಿ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸಬೇಕು. ಗುಂಡಿಯಿಂದಾಗಿ ಇತ್ತೀಚೆಗೆ ನಗರದಲ್ಲಿ ನಡೆದ ಅಫಘಾತದಲ್ಲಿ ಮೃತಪಟ್ಟ ಯುವತಿಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆಯ ರಾಜ್ಯ ನಿರ್ದೇಶಕ ಸೋಮಾನಾಯಕ್, ಜಿಲ್ಲಾಧ್ಯಕ್ಷ ಪಿ.ಕುಮಾರ್, ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ರತ್ನಮ್ಮ, ಖಜಾಂಚಿ ಸೈಯದ್, ಕಾರ್ಯದರ್ಶಿ ಸಮೀರ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಜಿಲ್ಲಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ…










