ಚಿಕ್ಕಮಗಳೂರು : ಡಿ. 25ರಂದು ಮುಖ್ಯಮಂತ್ರಿಗಳಿಂದ 1060 ಕೊಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ…

195
firstsuddi

ಚಿಕ್ಕಮಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿ. 25ರಂದು 1060 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದು, ಜಿಲ್ಲೆಯ ಬಹುದಿನದ ಕನಸು ಈಡೇರಿದಂತಾಗಿದೆ ಎಂದು ಬಿಜೆಪಿ ವಕ್ತಾರ ವರಸಿದ್ದಿ ವೇಣು ಗೋಪಾಲ ಅವರು ತಿಳಿಸಿದ್ದಾರೆ.
ನಗರದಲ್ಲಿ 190.68 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಬಡಾವಣೆ, ನಗರಕ್ಕೆ ದಿನದ 24 ಗಂಟೆ ನೀರು ಪೂರೈಸುವ 102.52 ಕೋಟಿ ರೂ. ವೆಚ್ಚದ ಅಮೃತ್ ಯೋಜನೆ, 3.75 ಕೋಟಿ ರೂ. ಗಳ ಲೋಕೋಪಯೋಗಿ ಇಲಾಖೆ ವಿಭಾಗ ಕಟ್ಟಡ ಕಾಮಗಾರಿಗಳ ಉದ್ಘಾಟನೆ ನೆರವೇರಲಿದೆ. ಇದೇ ವೇಳೆ 418.75 ಕೋಟಿ ರೂ. ವೆಚ್ಚದ ವೈದ್ಯಕೀಯ ಕಾಲೇಜು, 20 ಕೋಟಿ ರೂ.ಗಳ ಜಿಲ್ಲಾಸ್ಪತ್ರೆ ಉನ್ನತೀಕರಣ, ಎಐಟಿ ವೃತ್ತದಿಂದ ಹಿರೇಮಗಳೂರು ವರೆಗಿನ 29.40 ಕೋಟಿ ರೂ.ಗಳ ರಸ್ತೆ ಕಾಮಗಾರಿ, 174 ಕೋಟಿ ರೂ.ಗಳ ಸೂಪರ್ ಮಾರ್ಕೆಟ್ ಸ್ಪೆಷಾಲಿಟಿ ಆಸ್ಪತ್ರೆ, 2 ಕೋಟಿ ರೂ.ಗಳ ಪೊಲೀಸ್ ಸಮುದಾಯ ಭವನ, ಜಿ ಪ್ಲಸ್ 2 ಮಾದರಿಯ 115.2 ಕೋಟಿ ರೂ.ಗಳ 1511 ವಸತಿ ಸಮುಚ್ಚಯ, 3.60 ಕೋಟಿ ರೂ. ಗಳ ಔಷಧ ಉಗ್ರಾಣ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಡಿ. 25ರಂದು ಮಧ್ಯಾಹ್ನ 2.30ಕ್ಕೆ ನೇತಾಜಿ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕ ಸಿ.ಟಿ. ರವಿ ಅವರು ಅಧ್ಯಕ್ಷತೆ ವಹಿಸಲಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾರ್, ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್, ಪೌರಾಡಳಿತ ಸಚಿವ ನಾರಾಯಣಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತಿತರೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.