ಚಿಕ್ಕಮಗಳೂರು : ತಂದೆಯ ಸಾವಿನಿಂದ ಮನನೊಂದ ಮಗಳು ಆತ್ಮಹತ್ಯೆ!

104
firstsuddi

ಚಿಕ್ಕಮಗಳೂರು : ತಂದೆಯ ಸಾವಿನಿಂದ ಮನನೊಂದು ಮಗಳು ಭದ್ರಾ ನದಿಯ ಹಿನ್ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದ ಸ್ಪಂದನಾ(18) ಮೃತ ದುರ್ದೈವಿ. ಈಕೆ ಎನ್.ಆರ್.ಪುರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಂದಿನಂತೆ ಕಾಲೇಜಿಗೆ ತೆರಳಿದ ಸ್ಪಂದನಾ ನಿನ್ನೆ ಸಂಜೆ ನಾಲ್ಕು ಗಂಟೆಯಾದರೂ ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ತಾಯಿ ಎಲ್ಲಾ ಕಡೆ ಹುಡುಕಿದರೂ ಎಲ್ಲೂ ಸ್ಪಂದನಾಳ ಮಾಹಿತಿ ಸಿಕ್ಕಿರಲಿಲ್ಲ.

ಇಂದು ಮೆಣಸೂರು ಸೇತುವೆಯ ಸಮೀಪ ಶವವೊಂದು ನೀರಿನಲ್ಲಿ ತೇಲುವುದನ್ನು ಗಮನಿಸಿದ ಸಾರ್ವಜನಿಕರು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಎನ್ ಆರ್ ಪುರ ಪೊಲೀಸರು ಸಾರ್ವಜನಿಕರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿ ವಿದ್ಯಾರ್ಥಿನಿಯನ್ನು ಗುರುತಿಸಿದ್ದಾರೆ.

ನನ್ನ ಗಂಡ ಮಂಜುನಾಥ್ ಕಳೆದ ನಾಲ್ಕು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಅಂದಿನಿಂದಲೂ ನನ್ನ ಕೊನೆ ಮಗಳು ತುಂಬಾ ಮನನೊಂದು ಯಾವಾಗಲೂ ನೋವಿನಿಂದ ಇರುತ್ತಿದ್ದಳು. ಈ ನೋವಿನಿಂದ ಭದ್ರಾ ಹಿನ್ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.