ಚಿಕ್ಕಮಗಳೂರು: ಇಲ್ಲಿನ ಮಲ್ಲೇನಹಳ್ಳಿಯಲ್ಲಿರುವ ಪ್ರಸಿದ್ಧ ಬಿಂಡಿಗ ದೇವೀರಮ್ಮನ ದೇಗುಲಕ್ಕೆ ಡ್ರೆಸ್ ಕೋಡ್ ಆದೇಶ ಜಾರಿಯಾಗಿದ್ದು, ಸಾಂಪ್ರದಾಯಿಕ ಉಡುಗೆ ಧರಿಸಿ ದೇವಾಲಯಕ್ಕೆ ಬರುವಂತೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.
ಬಿಂಡಿಗ ದೇವೀರಮ್ಮ ದೇವಾಲಯಕ್ಕೆ ದೀಪಾವಳಿ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ರಾಜ್ಯ ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವೀರಮ್ಮನ ಬೆಟ್ಟ ಹತ್ತುತ್ತಾರೆ. ಮಧ್ಯರಾತ್ರಿಯೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತಿ ಸಮರ್ಪಿಸುತ್ತಾರೆ. ಹೀಗಾಗಿ ಬಿಂಡಿಗ ದೇವಾಲಯ ಮತ್ತು ಬೆಟ್ಟಕ್ಕೆ ಬರುವವರಿಗೆ ಡ್ರೆಸ್ ಕೋಡ್ ರೂಲ್ಸ್ ಹಾಕಲಾಗಿದೆ.
ಇನ್ನು ಮುಂದೆ ಪ್ರಸಿದ್ಧ ಬಿಂಡಿಗ ದೇವೀರಮ್ಮನ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಸ್ಲೀವ್ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ಬರುವಂತಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ಗೂ ನಿಷೇಧ ಹೇರಲಾಗಿದೆ.
ಮಕ್ಕಳಿಂದ ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರೂ ಬರುತ್ತಾರೆ. ಅವರಲ್ಲಿ ಪ್ರೇಮಿಗಳು ಸಹ ಇರುತ್ತಾರೆ. ಯಾರೇ ಬಂದರೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ನೀಡಿದೆ. ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಹಾಗೂ ರೀಲ್ಸ್ಗೆ ಅವಕಾಶವಿಲ್ಲ ಎಂದು ಸಂದೇಶ ನೀಡಿದೆ.
ಕಾಫಿನಾಡಿನಲ್ಲಿರುವ ಬಿಂಡಿಗ ದೇವಿರಮ್ಮನ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತದೆ. ಮಲೆನಾಡಿನ ತಪ್ಪಲಿನಲ್ಲಿರುವ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿರುವ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವೇ ದೇವೀರಮ್ಮ ಬೆಟ್ಟ. ಈ ದೇವಿಯನ್ನು ಬಿಂಡಿಗ ದೇವೀರಮ್ಮ ಎಂತಲೂ ಕರೆಯುತ್ತಾರೆ. ದೂರದೂರಿನಿಂದ, ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ದೇವಿರಮ್ಮ ಬೆಟ್ಟಕ್ಕೆ ಪ್ರವೇಶವಿರುವುದು ಮಾತ್ರ ನರಕ ಚತುರ್ದಶಿಯಂದು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧೆಡೆಗಳಿಂದ ಜನರು ಆಗಮಿಸಿ ದೇವೀರಮ್ಮನ ದರ್ಶನ ಪಡೆಯುತ್ತಾರೆ.
ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತವರು ನರಕ ಚತುರ್ದಶಿಯ ದಿನದಂದು ಬಂದು ಹರಕೆಯನ್ನು ದೇವಿಗೆ ಅರ್ಪಿಸುತ್ತಾರೆ. ಹರಕೆಯ ರೂಪದಲ್ಲಿ ದೇವಿಗೆ ತುಪ್ಪ, ಬಳೆ, ಬಟ್ಟೆ, ಕಟ್ಟಿಗೆಗಳನ್ನು ಸಮರ್ಪಿಸುತ್ತಾರೆ.
ದೇವೀರಮ್ಮ ದೇವಾಲಯದ ಇನ್ನೊಂದು ಪವಾಡವೇನೆಂದರೆ ದೀಪಾವಳಿಯ ಎರಡನೇ ದಿನ ದೇವಾಲಯದ ಬಾಗಿಲು ತನ್ನಿಂದ ತಾನೆ ತೆರೆಯುತ್ತದೆ. ಇದನ್ನು ನೋಡಲೆಂದೇ ಸಾವಿರಾರು ಭಕ್ತರು ಇಲ್ಲಿಗಾಗಮಿಸುತ್ತಾರೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡರೆ ಭಕ್ತರ ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.










