ಚಿಕ್ಕಮಗಳೂರು : ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಟ ಮೂರು ವರ್ಷಗಳು ಅವಕಾಶ ಕಲ್ಪಿಸುವಂತೆ ಕನ್ನಡಪರ ಸಂಘಟನೆಗಳ ಒತ್ತಾಯ…

130
firstsuddi

ಚಿಕ್ಕಮಗಳೂರು : ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಟ ಮೂರು ವರ್ಷಗಳು ಅವಕಾಶ ಕಲ್ಪಿಸುವಂತೆ ವಿವಿಧ ಕನ್ನಡಪರ ಸಂಘಟನೆಗಳು ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸಿವೆ.

ಅಪರ ಜಿಲ್ಲಾಧಿಕಾರಿ ರೂಪ ಅವರನ್ನು ಇಂದು ಭೇಟಿ ಮಾಡಿದ ಸಂಘಟನೆಗಳ ಪದಾಧಿಕಾರಿ ಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಈ ಹಿಂದೆ ಇದ್ದ ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ಭಾಷಾ ಕಲಿಕೆಗೆ ಎರಡು ವರ್ಷ ಅವಕಾಶವಿತ್ತು. ಅದರಿಂದಾಗಿ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ, ಆಲೋಚನಾ ಶಕ್ತಿ, ತಾರ್ಕಿಕಶಕ್ತಿ, ಮಾತೃಭಾಷೆಯ ಬಗ್ಗೆ ಆಳವಾದ ಜ್ಞಾನ ಬೆಳೆಯುತ್ತಿತ್ತು ಎಂದರು.

ಇದೀಗ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣಕ್ಕೆ ನಾಲ್ಕು ವರ್ಷಗಳನ್ನು ನಿಗಧಿಪಡಿಸಲಾಗಿದ್ದು ಅದರಲ್ಲಿ ಭಾಷಾ ಶಿಕ್ಷಣಕ್ಕೆ ಕೇವಲ ಒಂದೇ ವರ್ಷವನ್ನು ಸೀಮಿತಗೊಳಿಸಿರುವುದು ವಿಷಾಧದ ಸಂಗತಿ ಎಂದ ಪದಾಧಿಕಾರಿಗಳು ಹೀಗಾದರೆ ವಿದ್ಯಾರ್ಥಿಗಳಲ್ಲಿ ಮಾತೃ ಭಾಷೆಯ ಬಗ್ಗೆ ಆಳವಾದ ಜ್ಞಾನ, ಅಭಿಮಾನ, ಸಾಹಿತ್ಯದ ಅಧ್ಯಯನ ಕನ್ನಡದ ಸಂಸ್ಕøತಿ ಮತ್ತು ಪರಂಪರೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಗೂಗಲ್ ಸೇರಿದಂತೆ ಅನೇಕ ಕಡೆ ಕನ್ನಡ ಭಾಷೆಗೆ ಇತ್ತೀಚಿನ ವರ್ಷಗಳಲ್ಲಿ ಅಪಮಾನ ಮತ್ತು ಕುತ್ತು ಬರುತ್ತಿದೆ ಈಗ ಸರ್ಕಾರದಿಂದಲೇ ಕುತ್ತು ಬರುತ್ತಿರುವುದು ದುರಂತ ಎಂದ ಪದಾಧಿಕಾರಿಗಳು ನಾಲ್ಕು ವರ್ಷಗಳ ನೂತನ ಪದವಿ ಶಿಕ್ಷಣದಲ್ಲಿ ಇನ್ನಷ್ಟು ಅವಧಿಯ ಭಾಷಾ ಮೋದನೆಯನ್ನು ಹೆಚ್ಚಿಸುವ ಬದಲು ಒಂದು ವರ್ಷಕ್ಕೆ ಇಳಿಸಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಗೆ ಕನಿಷ್ಟ ಮೂರು ವರ್ಷಗಳ ಅವಧಿ ನಿಗಧಿಪಡಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಸಂಗಮ ಪ್ರತಿಷ್ಟಾನದ ಸಂಚಾಲಕ ಎಂ.ಸಿ.ಶಿವಾನಂದಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ, ನವಕರ್ನಾಟಕ ಯುವಶಕ್ತಿ ವೇದಿಕೆಯ ಅಧ್ಯಕ್ಷ ಸಿ.ಆರ್.ರಘು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಶಂಕರೇಗೌಡ, ಜಿಲ್ಲಾ ಡಾ|| ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸ್ಥಾಪಕ ಅಧ್ಯಕ್ಷ ಬಿ.ಎಂ.ಕುಮಾರ್, ಓಂಕಾರೇಗೌಡ, ಎಲ್.ವಿ.ಕೃಷ್ಣಮೂರ್ತಿ, ಕಸಾಪ ತಾಲ್ಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಹಾಜರಿದ್ದರು.