ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 77 ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ನಡೆದ ‘ಪ್ರಾಪರ್ಟಿ ರಿಟರ್ನ್ ಪರೇಡ್’ (ವಶಪಡಿಸಿಕೊಂಡ ಸ್ವತ್ತು ವಾರಸುದಾರರಿಗೆ ಮರಳಿ ನೀಡುವುದು) ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಮತ್ತು ಇತರ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಿದರು.
900 ಗ್ರಾಂ ಚಿನ್ನಾಭರಣ, 12 ಕೆ.ಜಿ ಬೆಳ್ಳಿ, 42ಕ್ಕೂ ಹೆಚ್ಚು ಬೈಕ್ ಗಳು, 7 ಲಕ್ಷ ರೂ. ನಗದು, ಏಳು ಕ್ವಿಂಟಲ್ ಅಡಿಕೆ, ಎರಡು ಮೊಬೈಲ್ ಫೋನ್, ಎರಡು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್, ಒಂದು ಟ್ಯಾಬ್ಲೆಟ್, ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಾರಸುದಾರರಿಗೆ ಹಿಂದಿರುಗಿಸಿದರು.
ಕಳ್ಳತನವಾದ ವಸ್ತುಗಳು ಮರಳಿ ಸಿಕ್ಕಿದ್ದಕ್ಕೆ ಜನರು ಸಂತಸಪಟ್ಟು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.










