ಚಿಕ್ಕಮಗಳೂರು : ಬಯಲುಸೀಮೆಗೆ ನೀರಾವರಿ ಯೋಜನೆಯನ್ನು ರೂಪಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ವಿರೋಧಿಸಿ ಆ.14 ನ್ನು ರೈತರ ಕರಾಳ ದಿನ ಆಚರಿಸಲು ನಿರ್ಧಾರ…

225
firstsuddi

ಚಿಕ್ಕಮಗಳೂರು : ಜಿಲ್ಲೆಯ ಬಯಲುಸೀಮೆಗೆ ನೀರಾವರಿ ಯೋಜನೆಯನ್ನು ರೂಪಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಆ.14 ನ್ನು ಜಿಲ್ಲೆಯಲ್ಲಿ ರೈತರ ಕರಾಳ ದಿನವನ್ನಾಗಿ ಆಚರಿಸಲು ನಗರದಲ್ಲಿ ನಡೆದ ರೈತರ ಸಭೆ ತೀರ್ಮಾನಿಸಿದೆ.
ನಗರದ ಶ್ರೀ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಕರಗಡ ಮತ್ತು ಬಯಲುಸೀಮೆ ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಕರಗಡ, ದಾಸರಹಳ್ಳಿ ಕೆರೆ, ಲಕ್ಯಾದ ಮಾದರಸನ ಕೆರೆ ಸೇರಿದಂತೆ ಬಯಲುಸೀಮೆಗೆ ಮೂರು ದಶಕಗಳಿಂದ ನೀರು ಒದಗಿಸದಿರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಮೂರು ವರ್ಷಕೊಮ್ಮೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಬಯಲುಸೀಮೆ ಜನರ ದಿಕ್ಕು ತಪ್ಪಿಸುತ್ತಿರುವುದನ್ನು ಖಂಡಿಸಿದ ಮುಖಂಡರು ನೆನೆಗುದಿಗೆ ಬಿದ್ದಿರುವ ಕರಗಡ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಒತ್ತಾಯಿಸಿದರು.
ಸದಾ ಬರಗಾಲಕ್ಕೆ ತುತ್ತಾಗುವ ಜಿಲ್ಲೆಯ ಬಯಲುಸೀಮೆಗೆ ನೀರಾವರಿ ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು ನೀರಾವರಿ ಯೋಜನೆಗಳು ಇಲ್ಲದಿರುವುದರಿಂದಾಗಿ ಆ ಭಾಗದ ತೆಂಗು, ಅಡಿಕೆ ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗುತ್ತಿವೆ, ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಆ.14 ರಂದು ರೈತರ ಕರಾಳ ದಿನವನ್ನಾಗಿ ಆಚರಿಸುವುದರ ಜೊತೆಗೆ ಅಂದು ನಿಡಘಟ್ಟ ಗ್ರಾಮದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಗುಡಿ ಮುಂದೆ ಪ್ರತಿಭಟನೆ ನಡೆಸಲು ಜನಪ್ರತಿನಿಧಿಗಳ ನಿರ್ಲಕ್ಷ್ಯ ಕುರಿತು ಪ್ರತಿ ಹಳ್ಳಿಗಳಿಗೆ ತೆರಳಿ ರೈತರೊಂದಿಗೆ ಚರ್ಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕರಗಡ ಮತ್ತು ಬಯಲುಸೀಮೆ ನೀರಾವರಿ ಹೋರಾಟ ಸಮಿತಿಯ ಸಂಚಾಲಕರಾದ ರವೀಶ್ ಬಸಪ್ಪ, ಗುರುಶಾಂತಪ್ಪ, ಹೆಚ್.ಎಂ.ರೇಣುಕಾರಾಧ್ಯ, ನಟರಾಜ್ ಎಸ್.ಕೊಪ್ಪಲು, ರೈತ ಮುಖಂಡರಾದ ಕಳಸಾಪುರ ಮರಿಸಿದ್ದೇಗೌಡ, ಕೆಂಜೇಗೌಡ, ಲಕ್ಯಾ ರಮೇಶ್, ನಿಡಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಸಭೆಯಲ್ಲಿ ಪಾಲ್ಗೊಂಡಿದ್ದರು.