ಚಿಕ್ಕಮಗಳೂರು : ಹಕ್ಕು ಪತ್ರ ನೀಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

92
firstsuddi

ಚಿಕ್ಕಮಗಳೂರು : ಆರು ದಶಕಗಳಿಂದ ತಾವು ವಾಸವಿರುವ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ತರೀಕೆರೆ ತಾಲ್ಲೂಕಿನ ನೇರಲಕೆರೆಯ ಪರಿಶಿಷ್ಟ ಸಮುದಾಯದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳೊಂದಿಗೆ ಇಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.

ತರೀಕೆರೆ ತಾಲ್ಲೂಕು ನೇರಲಕೆರೆಯ ಸರ್ವೇ ನಂ.4 ರಲ್ಲಿ 60 ವರ್ಷಗಳಿಂದ ನಾವು ಮನೆ ಮತ್ತು ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ, ನಾವು ಅತ್ಯಂತ ಕಡುಬಡವರಾಗಿದ್ದು, ಮನೆಗಳಿಗೆ ಸಂಬಂಧಿಸಿದಂತೆ ನಮ್ಮ ಬಳಿ ಯಾವುದೇ ದಾಖಲೆ ಅಥವಾ ಹಕ್ಕು ಪತ್ರಗಳಿಲ್ಲ ಎಂದು ತಿಳಿಸಿದರು.

ನಮ್ಮ ಮನೆಗಳಿಗೆ ಹಕ್ಕುಪತ್ರ ನೀಡುವಂತೆ ಸ್ಥಳೀಯ ಗ್ರಾಮ ಪಂಚಾಯತಿಯನ್ನು ಕೇಳಿದರೆ ಮನೆ ನಿರ್ಮಿಸಿರುವ ಜಾಗ ಶ್ರೀ ನರಸಿಂಹ ದೇವರಿಗೆ ಸೇರಿರುವುದರಿಂದ ಸರ್ಕಾರಿ ಸೌಲಭ್ಯ ಕೊಡಲು ಬರುವುದಿಲ್ಲ ಎಂದು ಹೇಳುತ್ತಾರೆ ಎಂದರು.

ಆದರೆ ಗ್ರಾಮದ ಸರ್ವೇ ನಂ.272 ರ ಮಲ್ಲೇದೇವರಿಗೆ ಸೇರಿದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಮೇಲ್ವರ್ಗದವರಿಗೆ ಆ ಜಾಗವನ್ನು ಸರ್ಕಾರಿ ಜಾಗವಾಗಿ ಪರಿವರ್ತಿಸಿ ಹಕ್ಕುಪತ್ರ ಮತ್ತು ದಾಖಲೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ನಾವು ಹಕ್ಕುಪತ್ರಗಳನ್ನು ಕೇಳಲು ಹೋದರೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಜಾಗವನ್ನು ಮಂಜೂರು ಮಾಡಿಸಿಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ, ಸರ್ವೇ ನಂ.2 ರಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇದುವರೆಗೂ ದಾಖಲಾತಿ ನೀಡಿಲ್ಲ ಎಂದು ಆರೋಪಿಸಿದರು.

ನಮ್ಮ ಮನೆಗಳಿಗೆ ಹಕ್ಕುಪತ್ರ ಅಥವಾ ದಾಖಲೆಗಳು ಇಲ್ಲದಿರುವುದರಿಂದಾಗಿ ಸರ್ಕಾರದ ಯಾವುದೇ ಸವಲತ್ತುಗಳು ನಮಗೆ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡ ಸಂತ್ರಸ್ತರು ನಾವು ವಾಸಿಸುತ್ತಿರುವ ಜಾಗವನ್ನು ಸರ್ವೇ ನಂ.272ರ ಜಾಗವನ್ನು ಮಾಡಿರುವಂತೆ ಸರ್ಕಾರಿ ಜಾಗವನ್ನಾಗಿ ಪರಿವರ್ತಿಸಿ ತಮಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ನವೀನ್, ವಸಂತ, ಗ್ರಾಮಸ್ಥರಾದ ಲೀಲ, ಜಯಮ್ಮ, ಶಿವಮ್ಮ, ಕುಮಾರಸ್ವಾಮಿ, ಸಂಜಯ್, ಕುಮಾರಿ, ಕುಮಾರಪ್ಪ, ಗಂಗಮ್ಮ, ಚಂದ್ರಮ್ಮ, ರಾಜಾನಾಯ್ಕ, ಜಯಣ್ಣ ಹಾಜರಿದ್ದರು.