ಚಿಕ್ಕಮಗಳೂರು: ಮಳೆ, ಬೆಳೆ ಸಮೃದ್ದಿಗಾಗಿ ದೇವರ ಮೊರೆ ಹೋದ ಉಂಡಾಡಿ ಹಳ್ಳಿ ಗ್ರಾಮಸ್ಥರು

302

ಚಿಕ್ಕಮಗಳೂರು : ಮಳೆ, ಬೆಳೆ ಮತ್ತು ಗ್ರಾಮದ ಸಮೃದ್ದಿಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಉಂಡಾಡಿಹಳ್ಳಿಯಲ್ಲಿ ಭಾನುವಾರ ಗ್ರಾಮಸ್ಥರು ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಳೆದ ಕೆಲವು ದಿನಗಳಿಂದ ಸುಣ್ಣ ಬಣ್ಣ ಹೊಡೆದು ನವೀಕರಿಸಲಾಗಿದ್ದ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹಳ್ಳಿಯ ವಾಸ್ತು ದೋಷ ನಿವಾರಣೆಗಾಗಿ ಶನಿವಾರ ರಾತ್ರಿ ವಾಸ್ತು ರಾಕ್ಷೋಘ್ನ ಹೋಮ, ಬಲಿ ಪೂಜೆ ನೆರವೇರಿಸಲಾಯಿತು.
ಭಾನುವಾರ ನಸುಕಿನಲ್ಲಿ ಗ್ರಾಮ ದೇವತೆಗಳಾದ ಹಳ್ಳದಮ್ಮ, ಊರು ಮಾರಿಯಮ್ಮ, ದೊಡ್ಡಸ್ವಾಮಿಗೆ ಹಾಗೂ ಸಮೀಪದ ಹಿರೇಮಗಳೂರಿನಿಂದ ಕರೆ ತರಲಾಗಿದ್ದ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರಿಗೆ ಗ್ರಾಮಸ್ಥರು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.
ನಂತರ ಶ್ರೀ ವೀರಾಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ದೇವಾಲಯದ ಆವರಣದಲ್ಲಿ ನವಗ್ರಹ, ಶ್ರೀ ರಾಮನಾಮ ತಾರಕ ಹೋಮ ಮತ್ತು ಚಂಡಿಕಾ ಹೋಮ ನಡೆಯಿತು.ಮಧ್ಯಾಹ್ನ ಪೂರ್ಣಾಹುತಿ ನಂತರ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು.
ದೇವಾಲಯದ ಆವರಣದಲ್ಲಿ ಶ್ರೀ ವಿಷ್ಣು ವೈಕುಂಠ ಕಳಸ ಮತ್ತು ಶ್ರೀ ರಾಮನ ಪರಿವಾರ ದೇವತೆಗಳ ಕಳಸಗಳನ್ನು ಪ್ರತಿಷ್ಠಾಪಿಸಿ ಪಾಂಚರಾತ್ರ ಆಗಮ ಪದ್ದತಿಯಲ್ಲಿ ಪೂಜಿಸಲಾಯಿತು. ಆಲೂರಿನ ಆಗಮಿಕ ವೆಂಕಟೇಶ ಕಾಶ್ಯಪ ಅವರ ನೇತೃತ್ವದ ಅರ್ಚಕರ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿತು.
ಇದೇ ವೇಳೆ ಮಳೆ ಬೆಳೆ ಸುಭಿಕ್ಷವಾಗಿ ಗ್ರಾಮಕ್ಕೆ ಸಮೃದ್ದಿ ಕರುಣಿಸುವಂತೆ ಗ್ರಾಮಸ್ಥರು ಸಾಮೂಹಿಕವಾಗಿ ಒಕ್ಕೊರಲಿನಿಂದ ಪ್ರಾರ್ಥನೆ ಸಲ್ಲಿಸಿದರು. ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾಗ್ಯ ರಂಗನಾಥ್, ಹಾಲಿ ಸದಸ್ಯ ಸೋಮಶೇಖರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಇದೇ ವೇಳೆ ಗುಂಡಿ ಗೊಟರುಗಳಿಂದ ಕೂಡಿ ಸಂಚಾರಕ್ಕೆ ದುಸ್ತರವಾಗಿರುವ ಗ್ರಾಮದ ರಸ್ತೆಯನ್ನು ಅಭಿವೃದ್ದಿ ಪಡಿಸುವಂತೆ ಗ್ರಾಮಸ್ಥರು ಶಾಸಕ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮಸ್ಥ ಪುಟ್ಟಸ್ವಾಮಿ ಮಳೆ, ಬೆಳೆಯಾಗಿ ಗ್ರಾಮ ಸಮೃದ್ದಿಯಾಗಬೇಕು, ಹಳ್ಳಿಗೆ ವಾಸ್ತು ಸೇರಿದಂತೆ ತಗುಲಿರುವ ಎಲ್ಲಾ ದೋಷಗಳು ನಿವೃತ್ತಿಯಾಗಿ ಗ್ರಾಮದ ಅಭಿವೃದ್ದಿಯಾಗಬೇಕು ಎಂಬ ಸಂಕಲ್ಪದಿಂದ ಈ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ರಂಗಸ್ವಾಮಿ, ತಿಮ್ಮೇಗೌಡ, ಧರ್ಮೇಗೌಡ, ಶಂಕರೇಗೌಡ, ಪದ್ಮೇಗೌಡ, ಶೇಷೇಗೌಡ, ಸೋಮೇಗೌಡ ಹಾಜರಿದ್ದರು.