ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸ ಬಳಕೆ- ಇಬ್ಬರು ಆರೋಪಿಗಳ ಬಂಧನ…

110
firstsuddi

ಚಿಕ್ಕಮಗಳೂರು: ಜಿಲ್ಲೆಯ ಮಾಂಸಾಹಾರಿ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸ ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಲತೀಫ್, ಶಿವರಾಜ್ ಬಂಧಿತ ಆರೋಪಿಗಳು. ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ಘಟನೆ ನಡೆದಿದೆ.

ಈ ಎರಡು ಹೋಟೆಲ್‍ನಲ್ಲಿ ಊಟ ಮಾಡಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಐದು ಕೆಜಿ ದನದ ಮಾಂಸ ಹಾಗೂ ಅದರಿಂದ ತಯಾರಿಸಿದ್ದ ಬಿರಿಯಾನಿಯನ್ನೂ ವಶಕ್ಕೆ ಪಡೆದಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್‌ ಅಡುಗೆ ಮಾಡುತ್ತಿದ್ದಾರೆ.

ಕುರಿ ಮಟನ್ ಕೆ.ಜಿ.ಗೆ 700-800 ರೂ. ಇದೆ. ಆದರೆ ದನದ ಮಾಂಸ ಕೆಜಿಗೆ 200-300 ರೂ. ಬೆಲೆಗೆ ಸಿಗುತ್ತದೆ. ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಶ್ರಣದ ಅಡುಗೆಯನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ.

ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.