ಚಿಕ್ಕಮಗಳೂರು : ಯಕ್ಷಗಾನ ಅಭಿಮಾನಿ ಬಳಗ ಸಾಂಸ್ಕೃತಿಕ ಸಂಘ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಶ್ರಯದಲ್ಲಿ ಚಕ್ರಚಂಡಿಕೆ ಯಕ್ಷಗಾನ

349
firstsuddi

ಚಿಕ್ಕಮಗಳೂರು : ಯಕ್ಷಗಾನ ಅಭಿಮಾನಿ ಬಳಗ, ಹವ್ಯಕ ಬಳಗ, ಸಾಂಸ್ಕೃತಿಕ ಸಂಘ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಶ್ರಯದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಭಾನುವಾರ ನಡೆದ ಚಕ್ರಚಂಡಿಕೆ ಯಕ್ಷಗಾನ ನೋಡುಗರ ಮನಗೆದ್ದಿತು.
ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ವಿವಿಧ ಮೇಳಗಳ ಕಲಾವಿದರ ಪ್ರಾಸಬದ್ದ ಚುರುಕು ಸಂಭಾಷಣೆ, ನವಿರು ಹಾಸ್ಯ, ನೃತ್ಯ, ಮಿಂಚಿನ ಅಭಿನಯ ಪ್ರೇಕ್ಷಕರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟಿತು.
ಮೂರೂರು ಸರ್ವೇಶ್ವರ ಹೆಗಡೆ ಅವರ ಕಂಚಿನ ಕಂಠದ ಗಾಯನ, ನಾಗೇಂದ್ರ ಅವರ ನವಿರು ಹಾಸ್ಯ, ಕೃಷ್ಣನ ಪಾತ್ರಧಾರಿ ತೀರ್ಥಹಳ್ಳಿಯ ಗೋಪಾಲಾಚಾರ್ಯ ಅವರ ಅಭಿನಯ ನೋಡುಗರನ್ನು ಮಂತ್ರಮುಗ್ದಗೊಳಿಸಿತು.
ಇದೇ ವೇಳೆ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿಯ ವ್ಯವಸ್ಥಾಪಕ ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ಹಿರಿಯ ಕಲಾವಿದ ಗೋಪಾಲಾಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಸುಬ್ರಹ್ಮಣ್ಯ ಚಿಟ್ಟಾಣಿ ಅಭಿಮಾನಿಗಳ ಪ್ರೋತ್ಸಾಹದಿಂದಾಗಿ ತಮ್ಮ ತಂದೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಕಲೆಯನ್ನು ತಾವು ಮುಂದುವರೆಸುತ್ತಿರುವುದಾಗಿ ಹೇಳಿದರು.
ಕಲಾವಿದರಿಗೆ ಅಭಿಮಾನಿಗಳೇ ಶ್ರೀರಕ್ಷೆ, ಅವರ ಚಪ್ಪಾಳೆಯೇ ಸ್ಫೂರ್ತಿ ಅವರು ಎಲ್ಲಿಯವರೆಗೂ ಪ್ರೋತ್ಸಾಹಿಸುತ್ತಾರೋ ಅಲ್ಲಿಯವರೆಗೂ ಕಲಾವಿದರು ಇರುತ್ತಾರೆ ಎಂದರು.
ಯಕ್ಷಗಾನ ಅಭಿಮಾನಿ ಬಳಗದ ಅಧ್ಯಕ್ಷ ಆನಂದ್‍ಕುಮಾರ್ ಶೆಟ್ಟಿ, ಸಂಚಾಲಕರಾದ ಕೆ.ಎನ್.ಮಂಜುನಾಥ ಭಟ್, ವಿನೋದ್ ಭಟ್, ಹವ್ಯಕ ಬಳಗದ ಅಧ್ಯಕ್ಷ ಶಂಕರನಾರಾಯಣ ಭಟ್, ಸಾಂಸ್ಕøತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕಿ ಅಮೃತ ಹಾಜರಿದ್ದರು.