ಚಿಕ್ಕಮಗಳೂರು : ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆ, ಗಾಳಿ ಮತ್ತು ಪ್ರವಾಹದಿಂದ ಬೆಳೆ ನಷ್ಟ ಅನುಭವಿಸಿರುವ ಎಲ್ಲಾ ಕೃಷಿಕರಿಗೂ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಧನವನ್ನು ತಕ್ಷಣ ವಿತರಿಸುವಂತೆ ಮೂಡಿಗೆರೆ ತಾಲ್ಲೂಕು ಊರುಬಗೆ ಗ್ರಾ.ಪಂ. ವ್ಯಾಪ್ತಿಯ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಮತ್ತು ಬಿಎಸ್‍ಪಿ ಜಿಲ್ಲಾ ಸಂಯೋಜಕ ಮರಗುಂದ ಪ್ರಸನ್ನ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್ ಅವರನ್ನು ಸೋಮವಾರ ಭೇಟಿ ಮಾಡಿದ ರೈತರು ಈ ಸಂಬಂಧ ಮನವಿ ಸಲ್ಲಿಸಿದರು.
ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ನಾವು ಬೆಳೆದಿದ್ದ ಕಾಫಿ, ಮೆಣಸು, ಏಲಕ್ಕಿ, ಭತ್ತ, ಬಾಳೆ ಬೆಳೆ ನಾಶವಾಗಿದ್ದು, ಇದರಿಂದ ಆರ್ಥಿಕ ಸಂಕಷ್ಟದಲ್ಲಿದ್ದೇವೆ ಎಂದು ಅಳಲು ತೋಡಿಕೊಂಡ ರೈತರು ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಧನ ನೆರೆಯ ಹಾಸನ ಜಿಲ್ಲೆಯಲ್ಲಿ ಈಗಾಗಲೇ ವಿತರಿಸಲಾಗಿದೆ ಎಂದರು.
ಅತಿವೃಷ್ಠಿಯಾಗಿ 6 ತಿಂಗಳು ಕಳೆದರೂ ಇನ್ನೂ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆ ನಷ್ಟ ಅನುಭವಿಸಿರುವ ಎಲ್ಲಾ ರೈತರಿಗೂ ಪರಿಹಾರ ಧನ ನೀಡಿಲ್ಲ. ಬೆರಳೆಣಿಕೆಯಷ್ಟು ಕೃಷಿಕರಿಗೆ ಮಾತ್ರ ಪರಿಹಾರ ಧನ ನೀಡಲಾಗಿದೆ, ಅದರಲ್ಲೂ ಕೆಲವರಿಗೆ 800-2000-3000 ರೂಗಳಂತೆ ಕಡಿಮೆ ಮೊತ್ತ ವಿತರಿಸಲಾಗಿದೆ ಎಂದು ಆರೋಪಿಸಿದರು.
ಈ ತಾರತಮ್ಯ ನೀತಿಯನ್ನು ಕೈ ಬಿಡಬೇಕು, ರಾಜ್ಯ ಸರ್ಕಾರ ನಿಗಧಿಪಡಿಸಿರುವಂತೆ ಬೆಳ ನಷ್ಟ ಅನುಭವಿಸಿರುವ ಎಲ್ಲಾ ರೈತರಿಗೂ ಪ್ರತಿ ಎಕರೆಗೆ 7 ಸಾವಿರ ರೂನಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರಾದ ವಾಸುದೇವ್, ಸಂದೀಪ್, ನಿಶಾಂತ್ ಪಟೇಲ್, ಸುಬ್ರಾಯ, ಜಯಣ್ಣ, ಚೇತನ್, ಎಸ್.ಬಿ.ಮೋಹನ್ ಕುಮರ್ ಹಾಜರಿದ್ದರು.










