ಚಿಕ್ಕಮಗಳೂರು : ಸ್ವಾತಂತ್ರ್ಯ ಸೇನಾನಿ ಐಎನ್ಎ ರಾಮರಾವ್ ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಶಿಸ್ತು ಮತ್ತು ಅದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸಲಹೆ ನೀಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಿನ್ನೆ ಆಯೋಜಿಸಿದ್ದ ಭಾರತ ಸೇವಾದಳದ ನೇತಾರ ಐಎನ್ಎ ರಾಮರಾವ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಎನ್ಎ ರಾಮರಾವ್ ಅವರು ಭಾರತ ಸೇವಾದಳದ ಅಭಿವೃದ್ದಿಗೆ ಅಹರ್ನಿಶಿ ದುಡಿದವರು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಹೋರಾಟ ನಡೆಸಿದವರು. ಅಂತಹ ಮಹಾತ್ಮರ ಆದರ್ಶಗಳನ್ನು ನಾವು ಮೈಗೂಡಿಸಿ ಕೊಂಡರೆ ಭಾರತ ಮತ್ತೊಮ್ಮೆ ವಿಶ್ವ ಗುರುವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ನಿಸ್ವಾರ್ಥ ಸೇವೆ ನಮ್ಮನ್ನು ಚಿರಸ್ಥಾಯಿಯಾಗಿಸುತ್ತದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ದೇಶಭಕ್ತರು ಮತ್ತು ಮಹಾತ್ಮರನ್ನು ಎಲ್ಲರೂ ಪ್ರತಿನಿತ್ಯ ಸ್ಮರಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಭಾರತ ಸೇವಾ ದಳದ ನೇತಾರ ಐಎನ್ಎ ರಾಮರಾವ್ ಅವರು ನೇತಾಜಿ ಸುಭಾಸ್ಚಂದ್ರ ಬೋಸ್ ಅವರ ಒಡನಾಡಿಯಾಗಿದ್ದರು, ಅವರು ತಮ್ಮ ಇಡೀ ಜೀವನವನ್ನು ಸೇವಾದಳಕ್ಕೆ ಮುಡುಪಾಗಿಟ್ಟಿದ್ದರು ಎಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಹಿರೇಗೌಜ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶಪ್ಪ, ಶಿಕ್ಷಕರಾದ ಜಯಂತಿ, ನಾಗವೇಣಿ, ಸಾವಿತ್ರಿ ಉಪಸ್ಥಿತರಿದ್ದರು.










