ಚಿಕ್ಕಮಗಳೂರು : ಜೀವದ ಹಂಗು ತೊರೆದು ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಜೀವ ರಕ್ಷಿಸುವವರನ್ನು ಗುರುತಿಸಿ ಗೌರವಿಸಿದರೆ ಸಮಾಜದಲ್ಲಿ ಅಂತವರ ಸಂಖ್ಯೆ ಹೆಚ್ಚುತ್ತದೆ ಎಂದು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ ಹೇಳಿದರು.
ಚಿಕ್ಕಮಗಳೂರು ರೌಂಡ್ ಟೇಬಲ್ 164 ಸಂಸ್ಥೆ ನಗರದ ಜಿಲ್ಲಾ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿ ತಮ್ಮ ವೈಯಕ್ತಿಕ ಸುಖವನ್ನು ತೊರೆದು ಹಗಲು ರಾತ್ರಿ ಎನ್ನದೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ, ಅವರಿಗೂ ಹೆಂಡತಿ ಮಕ್ಕಳು ಸಂಸಾರ ಇರುತ್ತದೆ, ಅದನ್ನು ಬದಿಗೊತ್ತಿ ಸಾರ್ವಜನಿಕರ ಸಮಾಜದ ರಕ್ಷಣೆ ಮಾಡುತ್ತಾರೆ ಅಂತಹ ಸಂದರ್ಭದಲ್ಲಿ ಎಷ್ಟೋ ಜನ ಜೀವವನ್ನೂ ಕಳೆದುಕೊಳ್ಳುತ್ತಾರೆ ಎಂದು ವಿಷಾದಿಸಿದರು.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಪೋಲೀಸರ ಕಷ್ಟಸುಖಗಳನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು, ಕಾನೂನನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಿಕ್ಕಮಗಳೂರು ರೌಂಡ್ ಟೇಬಲ್ 164 ಸಂಸ್ಥೆಯ ಸದಸ್ಯ ವಿನಯ್ ರಾಜ್ ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ಪ್ರಾಣದ ಹಂಗು ತೊರೆದು ಪೋಲೀಸರು ಸಾರ್ವಜನಿಕರ ರಕ್ಷಣೆ ಮಾಡುತ್ತಾರೆ, ಅರಣ್ಯ ಇಲಾಖೆ ಸಿಬ್ಬಂಧಿಗಳೂ ಸಹ ಹಗಲು ರಾತ್ರಿ ಎನ್ನದೆ ವನ್ಯ ಸಂಪತ್ತನ್ನು ರಕ್ಷಿಸುತ್ತಾರೆ ಎಂದರು.
ಸಾರ್ವಜನಿಕರಲ್ಲೂ ಕೆಲವರು ಜೀವದ ಹಂಗು ತೊರೆದು ಆಪತ್ತಿನಲ್ಲಿರುವವರನ್ನು ರಕ್ಷಿಸುತ್ತಾರೆ ಅಂತಹವರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೂಡಿಗೆರೆ ತಾಲ್ಲೂಕಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ವೇಳೆ ಸಂತ್ರಸ್ಥರನ್ನು ರಕ್ಷಿಸಿದ ನಮ್ಮುಡುಗ್ರು ವಾಟ್ಸಾಪ್ ಗ್ರೂಪ್ ಸೇರಿದಂತೆ ಜಿಲ್ಲೆಯ 10 ಜನ ಪೋಲೀಸರು, 5 ಜನ ಅರಣ್ಯ ಇಲಾಖೆ ಸಿಬ್ಬಂಧಿ ಹಾಗೂ ಇಬ್ಬರು ಸಾರ್ವಜನಿಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಹೆಚ್ಚುವರಿ ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಶೃತಿ, ಸಹಾಯಕ ಅರಣ್ಯಾಧಿಕಾರಿ ಸಂತೋಷ್ ಕುಮಾರ್, ಚಿಕ್ಕಮಗಳೂರು ರೌಂಡ್ ಟೇಬಲ್ನ ಅಧ್ಯಕ್ಷ ನಿಶ್ಚಿತ್, ಖಜಾಂಚಿ ಸದ್ಗುಣ್, ಕಾರ್ಯದರ್ಶಿ ದೇವಾನಂದ್, ವಲಯ ಕಾರ್ಯದರ್ಶಿಗಳಾದ ವಿನಯ್, ರಘು, ನಮ್ಮುಡುಗ್ರು ತಂಡದ ದಿವಿನ್ ಮಗ್ಗಲಮಕ್ಕಿ, ಸಂಜಯ್ ಕೊಟ್ಟಿಗೆಹಾರ, ಆದರ್ಶ, ಗೌಡಹಳ್ಳಿ ಪ್ರಸನ್ನ, ತಳವಾರ ನವೀನ್, ಗುರುದತ್ ಉಪಸ್ಥಿತರಿದ್ದರು.










