ಚಿಕ್ಕಮಗಳೂರು: ಇಂದು ನಗರದ ನೇಕಾರ ಬೀದಿಯ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಶ್ರೀರಾಮನವಮಿ ಉತ್ಸವ ನೂರಾರು ಭಕ್ತರ ನಡುವೆ ಗುರುವಾರ ವೈಭವದಿಂದ ನಡೆಯಿತು.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ಶ್ರೀ ಕೋದಂಡ ರಾಮಚಂದ್ರ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ಅಲಂಕಾರ ಜರುಗಿತು.
ನಂತರ ನವಗ್ರಹ ಹೋಮ, ಆಂಜನೇಯ ಹೋಮ, ಶ್ರೀರಾಮನಾಮ ತಾರಕ ಹೋಮ ನೆರವೇರಿತು. ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು.
ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಕೋದಂಡ ರಾಮಚಂದ್ರ ಸ್ವಾಮಿಯ ರಾಜಬೀದಿ ಉತ್ಸವ, ರಾತ್ರಿ ದೇವಾಲಯದಲ್ಲಿ ಉಯ್ಯಾಲೆ ಸೇವೆ ಜರುಗಿದವು.
ದೇವಾಲಯದ ಅರ್ಚಕರಾದ ಕೆ.ವಿ.ಸತ್ಯಪ್ರಸನ್ನ ಮತ್ತು ವೆಂಕಟೇಶ್ ಅವರಿಂದ ರಾಮನವಮಿ ಉತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ರಾಮನವಮಿ ಪ್ರಯುಕ್ತ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ, ಸೀತಾಮಾತೆ, ಲಕ್ಷ್ಮಣ ಮತ್ತು ಆಂಜನೇಯ ಸ್ವಾಮಿಯನ್ನುರಜತ ಕಿರೀಟ ಹಾಗೂ ಆಭರಣಗಳಿಂದ ಅಲಂಕರಿಸಲಾಗಿತ್ತು.










