ಚಿಕ್ಕಮಗಳೂರು : ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಮಕ್ಕಳು ವಿದ್ಯಾವಂತರಾಗಿ ಹೊರಹೊಮ್ಮಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ನಗರದ ಭಾರತ ಸೇವಾದಳದ ಕಛೇರಿಯಲ್ಲಿ ನಡೆದ ನಿವೃತ್ತ ಸೇವಾದಳ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನವೆಂಬ ರೋಗಕ್ಕೆ ಶಿಕ್ಷಣ ದಿವ್ಯೌಷಧ, ವಿದ್ಯಾವಂತರಾದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನ, ಗೌರವ ದೊರೆಯುತ್ತದೆ, ವಿದ್ಯೆ ಸಾಧಕನ ಸ್ವತ್ತು. ವಿದ್ಯಾರ್ಥಿ ದೆಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ, ಅವುಗಳಿಗೆ ಬಲಿಯಾಗದೇ ಶ್ರದ್ದೆ ಮತ್ತು ಪರಿಶ್ರಮದಿಂದ ಓದಿದರೆ ಮಾತ್ರ ಅದು ಒಲಿಯುತ್ತದೆ ಎಂದು ಕಿವಿಮಾತು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ ಶಿಕ್ಷಕರು ಈ ದೇಶದ ಆಧಾರ ಸ್ತಂಭಗಳು, ಅವರು ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿ ವಹಿಸಿ ಶಿಕ್ಷಣ ನೀಡಿದರೆ ಮಕ್ಕಳು ವಿದ್ಯಾವಂತರಾಗುತ್ತಾರೆ ಆ ಮೂಲಕ ರಾಷ್ಟ್ರದ ಅಭಿವೃದ್ದಿಯಾಗುತ್ತದೆ ಎಂದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಐ.ಪಿ.ತನ್ಮಯಿ, ಎಂ.ಎಸ್.ಶರಣ್ಯ ಹಾಗೂ ಸೇವೆಯಿಂದ ನಿವೃತ್ತರಾದ ಭಾರತ ಸೇವಾದಳದ ಶಿಕ್ಷಕರಾದ ವಾಸುದೇವರಾಜ್ ಅರಸ್, ಟಿ.ಕಾಳಯ್ಯ, ಪುಂಡರೀಕ, ಮೊಗಣ್ಣಗೌಡ ಅವರನ್ನು ಸನ್ಮಾನಿಸಲಾಯಿತು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ಸದಸ್ಯರಾದ ತಿಮ್ಮೇಗೌಡ, ಶಾಂತಕುಮಾರ್, ಕುಮಾರಪ್ಪ, ಕ್ರೀಡಾ ತರಬೇತುದಾರ ಕೋಟೆ ಶಂಕರ್ ಉಪಸ್ಥಿತರಿದ್ದರು.










