ಚಿಕ್ಕಮಗಳೂರು : ಸಮಾಜದ ಪರಿವರ್ತನೆಗೆ ಶಿಕ್ಷಣ ಪ್ರಮುಖ ಸಾಧನ : ಬಿ.ಅಮ್ಜದ್.

436
firstsuddi

ಚಿಕ್ಕಮಗಳೂರು : ಸಮಾಜದ ಪರಿವರ್ತನೆಗೆ ಶಿಕ್ಷಣ ಪ್ರಮುಖ ಸಾಧನ, ವಿದ್ಯಾವಂತರನ್ನು ಸಮಾಜ ಗುರುತಿಸಿ ಗೌರವಿಸುತ್ತದೆ ಎಂದು ಸಿಪಿಐ ಮುಖಂಡ ಬಿ.ಅಮ್ಜದ್ ಹೇಳಿದರು.
ನಗರದ ಐ.ಜಿ. ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಇಸ್ಲಾಮಿ ಬೈತುಲ್ ಮಾಲ್ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯನಿಗೆ ಆಸ್ತಿ, ಅಧಿಕಾರ, ಅಂತಸ್ತು ಏನೇ ಇದ್ದರೂ ಆತನಿಗೆ ಶಿಕ್ಷಣವಿಲ್ಲದಿದ್ದರೆ ಉಪಯೋಗವಿಲ್ಲ, ಶಿಕ್ಷಣವಂತರಾದರೆ ಮಾತ್ರ ಮಕ್ಕಳು ಸಮಾಜದ ಆಸ್ತಿಯಾಗುತ್ತಾರೆ, ಮಕ್ಕಳು ವಿದ್ಯಾವಂತರಾದರೆ ಕುಟುಂಭದ ಅಭಿವೃದ್ದಿಯಾಗುತ್ತದೆ ಎಂದರು.
ಅಲ್ಪಸಂಖ್ಯಾತ ಸಮುದಾಯದವರು ಮತ್ತು ಬಡವರು ಇದನ್ನು ಅರಿತು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ತಮ್ಮ ಜವಾಬ್ದಾರಿ ಮುಗಿಯಿತೆಂದು ಕೈತೊಳೆದುಕೊಳ್ಳಬಾರದು ಅವರನ್ನು ನಿರಂತರವಾಗಿ ಗಮನಿಸಿ ತಿದ್ದಿ ತೀಡಬೇಕು, ಶಿಕ್ಷಣದ ಜೊತೆಗೆ ಅವರಲ್ಲಿ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಸಂಸ್ಕಾರವಂತರನ್ನಾಗಿ, ಉತ್ತಮ ನಾಗರೀಕರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.
ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಯರಾಂ, ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಿ ಹೊರಹೊಮ್ಮಬೇಕು ಎಂದು ಸಲಹೆ ಮಾಡಿದರು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ನಸ್ರುಲ್ಲಾ ಷರೀಫ್ ಮಾತನಾಡಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಇಸ್ಲಾಮಿ ಬೈತುಲ್ ಮಾಲ್ ಸಂಸ್ಥೆ ಅಧ್ಯಕ್ಷ ನಜೀರ್ ಅಹಮದ್ ತಮ್ಮ ಸಂಸ್ಥೆ ಈ ಶಾಲೆಯನ್ನು ದತ್ತು ಪಡೆದಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
223 ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು, ಇಸ್ಲಾಮಿ ಬೈತುಲ್ ಮಾಲ್ ಸಂಸ್ಥೆಯ ಕಾರ್ಯದರ್ಶಿ ಮುಸ್ತಾಕ್ ಅಹಮದ್, ಜಂಟಿ ಕಾರ್ಯದರ್ಶಿ ಶಬ್ಬೀರ್ ಅಹಮದ್, ನಿರ್ದೇಶಕರಾದ ಹಜ್ಮಲ್ ಷರೀಪ್, ಗಜನ್‍ಫರ್ ಅಲಿ, ಮುಖ್ಯ ಶಿಕ್ಷಕಿ ಶಹಜಾದಿ ಬಿ, ನಿವೃತ್ತ ಮುಖ್ಯ ಶಿಕ್ಷಕಿ ಶಂಶುನ್ನೀಸ, ಶಿಕ್ಷಕ ಎಸ್.ಎಂ.ಮಹೇಶಪ್ಪ ಉಪಸ್ಥಿತರಿದ್ದರು.