ಚಿಕ್ಕಮಗಳೂರು : ಕುಲಕಸುಬಿನಲ್ಲಿ ಹತ್ತುಹಲವು ಸಮಸ್ಯೆಗಳಿಂದ ತತ್ತರಿಸಿರುವ ಪ.ಜಾತಿ/ಪ.ವರ್ಗದ ಮೀನುಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ ಕುಮಾರ್ ಅವರು ಒತ್ತಾಯಿಸಿದರು.
ನಗರದ ಲಕ್ಷ್ಮೀಶ ಸಮುದಾಯ ಭವನದಲ್ಲಿ ಇಂದು ನಡೆದ ತಾಲ್ಲೂಕು ಶ್ರೀ ಗಂಗಾ ಪ.ಜಾತಿ/ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ.ಜಾತಿ/ಪ.ವರ್ಗದ ಮೀನುಗಾರರು ಸರ್ಕಾರ ಮತ್ತು ಇಲಾಖೆಯ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಮೀನು ಸಾಕಾಣಿಕೆಯಲ್ಲಿ ಮೇಲ್ವರ್ಗ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಕಾಟ, ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಅಸಹಕಾರ ಮತ್ತು ತಾತ್ಸಾರ ಹಾಗೂ ವ್ಯವಹಾರಕ್ಕೆ ಹಣವಿಲ್ಲದೇ ಪರದಾಡುತ್ತಿದ್ದಾರೆ ಎಂದರು.
ಇಲಾಖೆ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಪ.ಜಾತಿ/ಪ.ವರ್ಗದ ಮೀನುಗಾರರು ಮತ್ತು ಮೇಲ್ವರ್ಗದ ಮೀನುಗಾರರ ನಡುವೆ ತಾರತಮ್ಯ ಮಾಡುತ್ತಿದೆ, ಕೆಳವರ್ಗದ ಮೀನುಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಮೇಲ್ವರ್ಗದವರ ಮೀನು ಸಾಕಾಣಿಕೆ ಕೆರೆಯನ್ನು ಅಭಿವೃದ್ದಿಪಡಿಸುವ ಮೀನುಗಾರಿಕಾ ಇಲಾಖೆ ಪರಿಶಿಷ್ಠರ ಕೆರೆಯಲ್ಲಿ ಕೊಳಚೆ ತುಂಬಿ ಮೀನುಗಳು ಸಾಯುತ್ತಿದ್ದರೂ ಅತ್ತ ತಿರುಗಿ ನೋಡುತ್ತಿಲ್ಲ ಎಂದು ಆರೋಪಿಸಿದರು.
ಮೀನುಗಾರಿಕೆ ಇಲಾಖೆ ಮತ್ತು ರಾಜ್ಯ ಸರ್ಕಾರ ಪ.ಜಾತಿ/ಪ.ವರ್ಗದ ಮೀನುಗಾರರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಆರ್ಥಿಕ ಸಂಕಷ್ಟದಲ್ಲಿರುವ ಅವರ ಸಾಲವನ್ನು ಮನ್ನಾ ಮಾಡುವುದರ ಜೊತೆಗೆ, ಹೊಸ ಸಾಲ ನೀಡಬೇಕು, ಅವರಿಗೆ ನಿವೇಶನಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಶ್ರೀ ಗಂಗಾ ಅವರು ಪ.ಜಾತಿ/ಪ.ವರ್ಗದ ಮೀನುಗಾರಿಕೆ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ.ಧರ್ಮೇಶ್ ಅವರು ಮೀನುಗಾರಿಕೆ ಇಲಾಖೆ ಮತ್ತು ರಾಜ್ಯ ಸರ್ಕಾರ ಕೆಳವರ್ಗದ ಮೀನುಗಾರರಿಗೆ ಕಳೆದ 15 ವರ್ಷಗಳಿಂದ ಯಾವುದೇ ಸವಲತ್ತುಗಳನ್ನು ನೀಡಿಲ್ಲ ಎಂದು ದೂರಿದರು.
ಪ್ರಸಕ್ತ ಸಾಲಿನಲ್ಲಿ ಸಂಘ ನಾಲ್ಕು ಲಕ್ಷ ರೂ ವ್ಯವಹಾರ ನಡೆಸಿದ್ದು, 12.500 ರೂ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ನಾರಾಯಣ, ಗಣೇಶ, ಮುತ್ತು, ಪಿ.ರಾಮಚಂದ್ರ, ಮುನೇಶ್ವರ, ರಾಧಮ್ಮ, ಏಳುಮಲೈ, ಸುರೇಶ್, ಕಾವ್ಯ, ದಿವ್ಯ, ಯಶೋಧರ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸಮಸ್ಯೆಗಳಿಂದ ತತ್ತರಿಸಿರುವ ಪ.ಜಾತಿ/ಪ.ವರ್ಗದ ಮೀನುಗಾರರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು-ಕೆ.ಸಿ.ವಸಂತ ಕುಮಾರ್










