ಚಿಕ್ಕಮಗಳೂರು : ಹಸಿರು, ಸ್ವಚ್ಚ ಮತ್ತು ಸುಂದರ ಪರಿಸರವಿದ್ದರೆ ನಾವು ರೋಗಮುಕ್ತರಾಗಿ ಬದುಕಬಹುದು : ಎಸ್.ಆರ್.ಮಂಜುನಾಥ್.

107
firstsuddi

ಚಿಕ್ಕಮಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಮೌಲ್ಯಮಾಪನದಲ್ಲಿ ನಗರದ ಆಜಾದ್‍ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ತಾಲ್ಲೂಕಿನ ಉತ್ತಮ ಇಕೋ ಕ್ಲಬ್ ಶಾಲೆಯಾಗಿ ಹೊರಹೊಮ್ಮಿದೆ.

ಶಾಲೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಈ ಸಂಬಂಧ ಮುಖ್ಯ ಶಿಕ್ಷಕಿ ಬಿ.ಆರ್.ಗೀತ ಅವರಿಗೆ ಇಲಾಖೆ ವತಿಯಿಂದ ಪ್ರಮಾಣ ಪತ್ರ ನೀಡಿದರು.

ಈ ವೇಳೆ ಮಾತನಾಡಿದ ಅವರು ಹಸಿರು, ಸ್ವಚ್ಚ ಮತ್ತು ಸುಂದರ ಪರಿಸರವಿದ್ದರೆ ನಾವು ರೋಗಮುಕ್ತರಾಗಿ ಬದುಕಬಹುದು. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.

ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಹಸಿರು ಬೆಳೆಸಿ – ಪರಿಸರ ಉಳಿಸಿ ಪತ್ರ ಬರೆಯುವ ಅಭಿಯಾನವನ್ನು ನಡೆಸುವಂತೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಜಗದೀಶ್ ಮಾತನಾಡಿ ಶಾಲೆಯ ಇಕೋ ಕ್ಲಬ್‍ನ ಕಾರ್ಯಚಟುವಟಿಕೆಗಳು ಪ್ರಶಂಸನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಇಕೋ ಕ್ಲಬ್‍ನ ಮಾರ್ಗದರ್ಶಿ ಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್ ಹಸಿರು ಕಾರ್ಯಪಡೆಯಡಿ ಇಡೀ ವರ್ಷದಲ್ಲಿ ಪ್ರತಿವಾರ ಗಿಡ ನೆಡುವುದು, ಶಾಲಾ ಸ್ವಚ್ಚತಾ ಅಭಿಯಾನ, ಪರಿಸರ ಸಂರಕ್ಷಣೆ ಜಾಗೃತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಇಕೋ ಕ್ಲಬ್‍ನ ಪದಾಧಿಕಾರಿ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಶಿಕ್ಷಣ ಸಂಯೋಜಕ ಜಗದೀಶ್, ಶಾಲಾಭಿವೃದ್ದಿ ಸಮಿತಿ ಸದಸ್ಯೆ ಸೀಮ, ಶಿಕ್ಷಕರಾದ ನಾಗವೇಣಿ, ಜಯಂತಿ, ಸಾವಿತ್ರಿ ಉಪಸ್ಥಿತರಿದ್ದರು.