ಚಿಕ್ಕಮಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಹು ಸಂಖ್ಯಾತ ದಲಿತರನ್ನು ಬಿಟ್ಟು ದೇಶದಲ್ಲಿ ಕೆಲವೇ ಜನ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಘಟಕ ನಗರದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಿದ್ದ ಸರ್ವ ಜನರ ಸಂವಿಧಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪರಿವಾರದವರು ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸಿ ಅವರ ಕನಸು ಆಶಯ, ಚಿಂತನೆ ಮತ್ತು ಸಂವಿಧಾನವನ್ನು ನಾಶ ಮಾಡುತ್ತಿದ್ದಾರೆ, ದಲಿತರ ತಲೆಯ ಮೇಲೆ ಬಂಡೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ, ಅವರ ಮೇಲೆ ನಿರಂತರವಾಗಿ ದೌರ್ಜನ್ಯ ಮತ್ತು ಶೋಷಣೆಗಳು ನಡೆಯುತ್ತಿವೆ. ಮೋದಿ ಅವರು ಒಂದೆಡೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲೆ ಹಾಕುತ್ತಾರೆ, ಆದರೆ ಅವರ ಪರಿವಾರದವರು ಸಂವಿಧಾನ ಶಿಲ್ಪಿಯ ವಿಗ್ರಹಗಳನ್ನು ಧ್ವಂಸಗೊಳಿಸುತ್ತಿದ್ದಾರೆ, ಅಂಬೇಡ್ಕರ್ ಅವರ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರು ಎರಡು ವರ್ಷಗಳ ಕಾಲ ಸುಧೀರ್ಘ ಅಧ್ಯಯನ ನಡೆಸಿ ದೇಶದ ಸಂವಿಧಾನವನ್ನು ಬರೆದಿದ್ದಾರೆ, ಅವರ ಸಂವಿಧಾನದಿಂದಾಗಿ ದಲಿತರಿಗೆ, ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದ ಅವರು ಆದರೆ ಮೋದಿ ಮತ್ತು ಅವರ ಪರಿವಾರದವರು ಸಂವಿಧಾನ ಸರಿಯಿಲ್ಲ ಅದನ್ನು ಬದಲಾಯಿಸಬೇಕು ಎಂದು ಹೇಳುತ್ತಿದ್ದಾರೆ, ಬಿಜೆಪಿ ಅವರ ಆಡಳಿತದಲ್ಲಿ ಮೀಸಲಾತಿ ದೇಶದಲ್ಲಿ ಅಸ್ಥಿತ್ವ ಕಳೆದುಕೊಳ್ಳುವ ಪರಿಸ್ಥಿತಿ ಇಂದು ಎದುರಾಗುತ್ತಿದೆ, ರಾಷ್ಟ್ರೀಕರಣದ ವಿರುದ್ದ ಇಂದು ಖಾಸಗೀಕರಣ ನಡೆಯುತ್ತಿದೆ ಇದರಿಂದಾಗಿ ಬಹುಸಂಖ್ಯಾತ ದಲಿತರು ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದರೂ ಸಹ ರಾಜ್ಯದಲ್ಲಿ ನೆರೆಯಿಂದ ಬದುಕು ಕಳೆದು ಕೊಂಡವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ, ಪ್ರಕೃತಿ ವಿಕೋಪದ ವೇಳೆ ಬೇರೆ ರಾಜ್ಯಗಳಿಗೆ ನೀಡುವ ಪರಿಹಾರವನ್ನು ರಾಜ್ಯಕ್ಕೆ ನೀಡದೆ ದ್ರೋಹ ಮಾಡಿದ್ದಾರೆ ಎಂದು ದೂರಿದರು.
ಕೇಂದ್ರ ಸರ್ಕಾರದ ದಲಿತ ವಿರೋಧಿ ನಡೆಯನ್ನು ತಳ ಸಮುದಾಯದವರು ಮತ್ತು ದಲಿತರು ಗಂಭೀರವಾಗಿ ಪರಿಗಣಿಸಬೇಕು, ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ ದಲಿತರು ತಮಗೊದಗಿರುವ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಬೇಕು, ಸಮುದಾಯದ ಹಿತದೃಷ್ಠಿಯಿಂದ ಹರಿದು ಹಂಚಿ ಹೋಗಿರುವ ಸಂಘಟನೆಗಳು ಒಂದಾಗಬೇಕು, ದಲಿತ ಯುವ ಜನತೆ ಮೋದಿ ಮೋದಿ ಎನ್ನುತ್ತಾ ಬಿಜೆಪಿ ಹಿಂದೆ ಓಡುವುದನ್ನು ಬಿಡಬೇಕು, ಸಂವಿದಾನ ಉಳಿಸಲು ಪ್ರಾಣ ತ್ಯಾಗಕ್ಕೂ ಹೆದರದೆ ಹೋರಾಟಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ ಮಾತನಾಡಿ ದಲಿತ ವರ್ಗ ಇಂದು ಅಪಾಯದ ಅಂಚಿನಲ್ಲಿದೆ, ಮೋದಿ ಸರ್ಕಾರ ಧರ್ಮ ಸಂಸತ್ ಹೆಸರಿನಲ್ಲಿ ಸಂವಿಧಾನವನ್ನು ಬದಲಿಸುವ ಷಡ್ಯಂತ್ರ ಎಂದು ದೂರಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು, ವಿಭಾಗೀಯ ಪ್ರಧಾನ ಸಂಚಾಲಕ ಕೆ.ಸಿದ್ದರಾಜು, ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎನ್.ಮಹೇಂದ್ರ ಸ್ವಾಮಿ, ವಿಭಾಗೀಯ ಸಂಘಟನಾ ಸಂಚಾಲಕ ಶೂದ್ರ ಶ್ರೀನಿವಾಸ್, ಬಿಎಸ್.ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ನಂಜುಂಡ ಮೇಷ್ಟ್ರು, ವಸಂತ್, ಮೂರ್ತಿ ಬೀಸನಹಳ್ಳಿ, ಲಲಿತಮ್ಮ, ಅಂತೋಣಿಯಮ್ಮ, ಲತಾ ಉಪಸ್ಥಿತರಿದ್ದರು.
ಸಮಾವೇಶಕ್ಕೆ ಮುನ್ನ ನಗರದ ತಾಲ್ಲೂಕು ಕಛೇರಿ ಆವರಣದಿಂದ ಕುವೆಂಪು ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಿತು.
Home Breaking News ಚಿಕ್ಕಮಗಳೂರು:ದಲಿತ ಯುವ ಜನತೆ ಮೋದಿ ಮೋದಿ ಎನ್ನುತ್ತಾ ಬಿಜೆಪಿ ಹಿಂದೆ ಓಡುವುದನ್ನು ಬಿಡಬೇಕು:ಮಾಜಿ ಸಚಿವೆ ಮೋಟಮ್ಮ.










