ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ ಪ್ರಕರಣ- ಮೃತರ ಸಂಖ್ಯೆ ಐದಕ್ಕೆ ಏರಿಕೆ…

62
firstsuddi

ಚಿತ್ರದುರ್ಗ: ಇಲ್ಲಿನ ಕವಾಡಿಗರಹಟ್ಟಿಯಲ್ಲಿನ ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ನಿನ್ನೆ ಮೂವರು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಇಂದು ಕವಾಡಿಗರಹಟ್ಟಿಯ ರುದ್ರಪ್ಪ(50) ಹಾಗೂ ಪಾರ್ವತಮ್ಮ(75) ಎಂಬುವವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಈ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ವಾಂತಿ ಭೇದಿಯಿಂದ ಬಳಲುತ್ತಿದ್ದ ರುದ್ರಪ್ಪ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟರೇ, ಪಾರ್ವತಮ್ಮ ಕವಾಡಿಗರಹಟ್ಟಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಮೃತ ಪಾರ್ವತಮ್ಮ ಕಳೆದ ಎರಡು ವರ್ಷಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ಒಳಗಾಗಿದ್ದರು. ಎರಡು ದಿನದಿಂದ ವಾಂತಿ, ಭೇದಿ ಕಾಣಿಸಿಕೊಂಡಿತ್ತು. 1 ವರ್ಷದ ಮಗು ಸೇರಿದಂತೆ ಪಾರ್ವತಮ್ಮ ಅವರ ಕುಟುಂಬದ ಒಂಬತ್ತು ಸದಸ್ಯರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲುಷಿತ ನೀರು ಸೇವನೆ ಪ್ರಕರಣವು ಜುಲೈ 31ರಂದು ವರದಿಯಾಗಿತ್ತು. ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ ನಿವಾಸಿಗಳಾದ ಮಂಜುಳಾ (23) ಮತ್ತು ರಘು (27) ಎಂಬುವವರು ಸಾವಿಗೀಡಾಗಿದ್ದಾರೆ. ಕಲುಷಿತ ನೀರು ಸೇವಿಸಿ 36 ಮಂದಿ ಅಸ್ವಸ್ಥರಾಗಿದ್ದು, ಜುಲೈ 30ರಂದು ಗ್ರಾಮಕ್ಕೆ ಸಂಬಂಧಿಕರನ್ನು ಭೇಟಿ ಮಾಡಲು ಬಂದಿದ್ದ ಪ್ರವೀಣ್, ಮರುದಿನ ವಡ್ಡರಸಿದ್ದನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಎಇಇ ಆರ್. ಮಂಜುನಾಥ ಗಿರಡ್ಡಿ ಮತ್ತು ಜೆಇ ಎಸ್.ಆರ್. ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಲು ಅಧಿಕಾರಿಗಳು ಶಿಫಾರಸು ಮಾಡಿ ವರದಿ ಕಳುಹಿಸಿದ್ದಾರೆ. ಕವಾಡಿಗರಹಟ್ಟಿಯಲ್ಲಿ ವಾಲ್ವ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಸಿ.ಹೆಚ್. ಪ್ರಕಾಶ್ ಬಾಬು ಅವರನ್ನೂ ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ.

ನೀರು ಕಲುಷಿತಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ಅಸ್ವಸ್ಥಗೊಂಡವರು ಕುಡಿದ ನೀರು, ಮಲ-ಮೂತ್ರ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಕಾಲರಾ ಅಂಶ ಪತ್ತೆಯಾಗಿದೆ ಎಂದು ಲ್ಯಾಬ್ ವರದಿ ಹೇಳಿದೆ. ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿ ಇದೆ.

ಸರ್ಕಾರದಿಂದ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೇಳಿದ್ದಾರೆ. ಅದನ್ನು ಕೊಡಿಸುವಂತಹ ಕೆಲಸ ಮಾಡುತ್ತೇವೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಕೆ.ಸಿ ವಿರೇಂದ್ರ ಮಾಹಿತಿ ನೀಡಿದ್ದಾರೆ.