ಚೀನಾದಲ್ಲಿ ಹೆಚ್‍ಎಂಪಿವಿ ವೈರಸ್ ಸ್ಫೋಟ.

38

ನವದೆಹಲಿ: ಚೀನಾದಲ್ಲಿ ಹೆಚ್‍ಎಂಪಿವಿ ಸೋಂಕು ವ್ಯಾಪಕವಾಗಿದ್ದು, ಇದರ ಬೆನ್ನಲ್ಲೇ ಭಾರತದಲ್ಲೂ ಉಸಿರಾಟ ಸಂಬಂಧಿ ಆರೋಗ್ಯ ಸಮಸ್ಯೆಗಳ ಮೇಲೆ ನಿಗಾ ಇಡಲಾಗಿದೆ. ಭಾರತದಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಆರೋಗ್ಯ ಸೇವೆಗಳ ಮಹಾನಿರ್ದೇಶಕರಾದ ಡಾ. ಅತುಲ್ ಗೋಯಲ್ ಅವರು ಪ್ರತಿಕ್ರಿಯೆ ನೀಡಿದ್ದು, ಹೆಚ್‍ಎಂಪಿವಿ ವೈರಸ್ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ವೃದ್ಧರು ಹಾಗೂ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳಬಹುದಾಗಿದೆ. ದೇಶದಲ್ಲಿ 2024ರ ಡಿಸೆಂಬರ್ ನಲ್ಲಿ ಉಸಿರಾಟ ಸಂಬಂಧಿ ಸಮಸಯೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿಲ್ಲ. ಪ್ರಸ್ತುತ ಪರಿಸ್ಥಿತಿ ಅಪಾಯಕಾರಿಯಾಗಿಲ್ಲ. ಒಂದೊಮ್ಮೆ ಸಮಸ್ಯೆ ಕಾಣಿಸಿಕೊಂಡರು ನಮ್ಮ ಆಸ್ಪತ್ರೆಗಳಲ್ಲಿ ಅದಕ್ಕೆ ಬೇಕಾದಷ್ಟು ವ್ಯವಸ್ಥೆಗಳು ಲಭ್ಯವಿದೆ ಎಂದು ತಿಳಿಸಿದರು. ಹಾಗೂ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದರು. ಸಾಮಾನ್ಯವಾಗಿ ಉಸಿರಾಟ ಸಂಬಂಧಿತ ಸಾಂಕ್ರಾಮಿಕ ರೋಗಗಳು ಮಕ್ಕಳು ಹಾಗೂ ಹಿರಿಯರಲ್ಲಿ ಅತೀ ಬೇಗನೆ ಕಾಣಿಸಿಕೊಳ್ಳುತ್ತದೆ. ಚೀನಾದಲ್ಲಿ ಚಳಿಗಾಲದಲ್ಲಿ ಈ ರೀತಿಯ ಕೆಲ ವೈರಸ್‍ಗಳು ಆತಂಕ ಸೃಷ್ಟಿಸುವುದು ಸಾಮಾನ್ಯವಾಗಿದೆ. ಕೆಲ ವೈರಸ್ ಹೆಚ್ಚು ತಲ್ಲಣ ಉಂಟು ಮಾಡಲಿದೆ. ಕಳೆದ ಐದು ವರ್ಷದಲ್ಲಿ ಪ್ರತಿ ಚಳಿಗಾಲದಲ್ಲಿ ಚೀನಾದಲ್ಲಿ ಕೆಲ ವೈರಸ್ ಆತಂಕ ಸೃಷ್ಟಿಸಿದೆ. ಆದರೆ, ಇದರಿಂದ ಭಾರತಕ್ಕೆ ಯಾವುದೇ ಆತಂಕವಿಲ್ಲ ಎಂದು ಹೇಳಿದರು.