ಚುನಾವಣಾ ಸಮಯದಲ್ಲಿ ತನಿಖಾ ಸಂಸ್ಥೆಗಳು ದೆಹಲಿ ಸಿಎಂ ಅತಿಶಿಯನ್ನು ಬಂಧಿಸಬಹುದು: ಕೇಜ್ರಿವಾಲ್ ಆರೋಪ.

35

ನವದೆಹಲಿ: ಸಂಜೀವಿನಿ, ಮಹಿಳಾ ಸಮ್ಮಾನ್‍ನಂತಹ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡುತ್ತಿದ್ದು, ಇದನ್ನು ಸಹಿಸಲಾಗದ ಜನರು ಮುಖ್ಯಮಂತ್ರಿ ಅತಿಶಿ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಲು ಸಂಚು ಮಾಡುತ್ತಿದ್ದಾರೆ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಇಡಿ, ಐಟಿ ಮತ್ತು ಸಿಬಿಐ ಅಧಿಕಾರಿಗಳ ಸಭೆ ನಡೆದಿದೆ. ಮೇಲಿನಿಂದ ಸಿಎಂ ಅತಿಶಿ ಬಂಧಿಸಲು ಅವರಿಗೆ ಆದೇಶ ಬಂದಿದೆ ಎಂದು ನನ್ನ ಮೂಲಗಳಿಂದ ತಿಳಿದುಬಂದಿದೆ. ನಾನು ಸಂಪೂರ್ಣ ಜವಾಬ್ದಾರಿಯಿಂದ ಈ ಗಂಭೀರ ಆರೋಪ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯಲ್ಲಿ ಬಿಜೆಪಿಗೆ ಯಾವುದೇ ಕೆಲಸವಿಲ್ಲ. ಅವರು ಕೇಜ್ರಿವಾಲ್ ಅವರನ್ನು ಟೀಕಿಸುವ ಮತ್ತು ನಿಂದಿಸುವ ಮೂಲಕ ಮತವನ್ನು ಕೇಳುತ್ತಿದ್ದಾರೆ. ಆದರೆ ಆಮ್ ಆದ್ಮಿ ಪಕ್ಷವು ತಾನು ಮಾಡಿದ ಕೆಲಸದ ಆಧಾರದ ಮೇಲೆ ಮತವನ್ನು ಕೇಳುತ್ತಿದೆ. ನಾವು ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಿಸಿದ್ದೇವೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಯೋಜನೆಯನ್ನು ಘೋಷಿಸಿದ್ದೇವೆ. ಈ ಯೋಜನೆಗಳ ನೋಂದಣಿಯಿಂದ ಬಿಜೆಪಿಗೆ ತೊಂದರೆಯಾಗಿದೆ ಎಂದು ಹೇಳಿದರು. ದೆಹಲಿ ಮುಖ್ಯಮಂತ್ರಿ ಅತಿಶಿ ಮಾತನಾಡಿ, ದೆಹಲಿಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣವನ್ನು ತಡೆಯಲು ನನ್ನ ವಿರುದ್ಧ ನಕಲಿ ಪ್ರಕರಣ ದಾಖಲಿಸುವ ಪ್ರಯತ್ನ ಮಾಡಲಾಗುತ್ತಿದೆ. ನಾವು ಇಲ್ಲಿಯವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಹಾಗಾಗಿ ಅವರ ಏಜೆನ್ಸಿಗಳು ನನ್ನನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದರೆ, ಕೊನೆಯದಾಗಿ ಸತ್ಯಕ್ಕೆ ಗೆಲುವು ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.