ಛತ್ರಪತಿ ಸಾಹು ಮಹಾರಾಜರು ನೀಡಿದ ಮೀಸಲಾತಿಯಿಂದಾಗಿ ಕೆಳವರ್ಗದವರ ಬದುಕು ಬದಲಾಗಿದೆ- ಕೆ.ಬಿ. ಸುಧಾ.

66
firstsuddi

ಚಿಕ್ಕಮಗಳೂರು: ಛತ್ರಪತಿ ಸಾಹು ಮಹಾರಾಜರು ನೀಡಿದ ಮೀಸಲಾತಿಯಿಂದಾಗಿ ಕೆಳವರ್ಗದವರ ಬದುಕು ಬದಲಾಗಿದೆ ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ. ಸುಧಾ ಹೇಳಿದರು.

ನಗರದ ಬಿಎಸ್‍ಪಿ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಮೀಸಲಾತಿಯ ಜನಕ ಛತ್ರಪತಿ ಸಾಹು ಮಹಾರಾಜರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ ಪೂರ್ವದಲ್ಲಿ ಕೆಳವರ್ಗದ ಜನರ ಬದುಕು ಮೇಲ್ವರ್ಗದವರ ದೌರ್ಜನ್ಯ, ಶೋಷಣೆ, ದಬ್ಬಾಳಿಕೆ, ಸಾಮಾಜಿಕ ಪಿಡುಗುಗಳಿಂದ ಅಸಹನೀಯವಾಗಿತ್ತು ಎಂದರು.

ಬರೋಡ ಸಂಸ್ಥಾನದ ಮಹಾರಾಜ ಛತ್ರಪತಿ ಸಾಹು ಮಹಾರಾಜರು ದೇಶದಲ್ಲೇ ಮೊದಲ ಬಾರಿಗೆ ಕೆಳವರ್ಗದ ಜನರಿಗಾಗಿ ಮೀಸಲಾತಿಯನ್ನು ಜಾರಿಗೆ ತಂದರು. ದೇವದಾಸಿ ಪದ್ಧತಿಯ ನಿರ್ಮೂಲನೆ ಸೇರಿದಂತೆ ಅನೇಕ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡರು. ಅವುಗಳ ಫಲವಾಗಿ ಕೆಳವರ್ಗದ ಜನ ಶಿಕ್ಷಣವಂತರಾಗಲು ಹಕ್ಕುಗಳನ್ನು ಪಡೆದುಕೊಳ್ಳಲು ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯವಾಯಿತು ಎಂದು ತಿಳಿಸಿದರು.

ಪಕ್ಷದ ಮುಖಂಡ ಪಿ.ವಿ. ತಂಬನ್ ಮಾತನಾಡಿ, ಸಾಹು ಮಹಾರಾಜರು ಮೀಸಲಾತಿ ನೀಡದಿದ್ದಲ್ಲಿ ಕೆಳವರ್ಗದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಬರೋಡ ಸಂಸ್ಥಾನದ ಮಹಾರಾಜ ಸಾಹು ಮಹಾರಾಜರು 1902ರ ಜುಲೈ 26ರಂದು ಮೀಸಲಾತಿಯನ್ನು ಜಾರಿಗೆ ತಂದರು. ಅದರ ಪ್ರೇರಣೆಯಿಂದ ನಂತರ ಮೈಸೂರು ಸಂಸ್ಥಾನದಲ್ಲಿ ನಾಡಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿಯನ್ನು ಜಾರಿಗೆ ತಂದರು ಎಂದರು.

ಸಾಹು ಮಹಾರಾಜರು ಒಂದೊಮ್ಮೆ ಮೀಸಲಾತಿಯನ್ನು ಜಾರಿಗೆ ತರದಿದ್ದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರೂ ಸಹ ಓದಲು ಸಾಧ್ಯವಾಗುತ್ತಿರಲಿಲ್ಲ ಎಂದ ಅವರು, ಒಂದು ಎರಡು ತಲೆಮಾರಿನ ಹಿಂದೆ ಕೆಳವರ್ಗದ ಜನರಿಗೆ ಶಿಕ್ಷಣ ದೊರಕಿತೆಂದರೆ ಅದು ಸಾಹು ಮಹಾರಾಜರ ಕೊಡುಗೆ ಎಂದರು.

ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಗಂಗಾಧರ್ ಮಾತನಾಡಿದರು. ಜನ್ಮದಿನದ ಅಂಗವಾಗಿ ಸಾಹು ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಬಿಎಸ್‍ಪಿ ಅಸೆಂಬ್ಲಿ ಸಂಯೋಜಕಿ ಕೆ.ಎಸ್. ಮಂಜುಳ, ಮಾಜಿ ಅಧ್ಯಕ್ಷ ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ, ಗಿರೀಶ್, ಸಿದ್ದಯ್ಯ ಉಪಸ್ಥಿತರಿದ್ದರು.