ಬೆಂಗಳೂರು: ಜಗದೀಶ್ ಶೆಟ್ಟರ್ ಅವರು ನಿನ್ನೆ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಇಂದು ಯಾಕೆ ಬಿಜೆಪಿ ಸೇರಿದ್ದಾರೋ, ಅವರಿಗೆ ಯಾವ ಒತ್ತಡವಿತ್ತೋ ಗೊತ್ತಿಲ್ಲ. ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿ ಸೇರ್ಪಡೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮತ್ತೆ ನನ್ನನ್ನು ಬಿಜೆಪಿಗೆ ವಾಪಸ್ ಬರುವಂತೆ ತಮ್ಮ ಕ್ಷೇತ್ರದ ನಾಯಕರು, ಕಾರ್ಯಕರ್ತರ ಮೂಲಕ ಆಹ್ವಾನಿಸಲಾಗುತ್ತಿದೆ ಎಂದು ಶೆಟ್ಟರ್ ಅವರು ನಿನ್ನೆ ನನಗೆ ಮಾಹಿತಿ ನೀಡಿದ್ದರು. ಕಾಂಗ್ರೆಸ್ ಪಕ್ಷ ನನಗೆ ರಾಜಕೀಯವಾಗಿ ಮರುಜೀವ ಕೊಟ್ಟಿದೆ. ಹೀಗಾಗಿ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟು, ಅವರು ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದೆ. ಈಗ ಮಾಧ್ಯಮಗಳ ಮೂಲಕ ಶೆಟ್ಟರ್ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ತಿಳಿಯಿತು ಎಂದು ತಿಳಿಸಿದ್ದಾರೆ.
ಅವರು ಹಿರಿಯ ನಾಯಕರು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಬಹಳ ಗೌರವದಿಂದ ನಡೆಸಿಕೊಂಡಿತ್ತು. ಇತ್ತೀಚೆಗೆ ರಾಮಮಂದಿರ ವಿಚಾರದಿಂದ ಹಿಡಿದು ಬೇರೆ, ಬೇರೆ ವಿಷಯಗಳ ಬಗ್ಗೆ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಅನೇಕ ಹೇಳಿಕೆಗಳನ್ನು ನೀಡಿದ್ದರು. ನಾವು ಅವರ ಮೇಲೆ ಇಟ್ಟಿದ್ದ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಮಾಧ್ಯಮಗಳೇ ವಿಶ್ಲೇಷಣೆ ಮಾಡುತ್ತಿವೆ. ವಿಧಾನ ಪರಿಷತ್ ಸಭಾಪತಿಗಳಿಗೆ ಅವರು ಕರೆ ಮಾಡಿ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಅಧಿಕಾರಿಗಳ ಮೂಲಕ ಮಾಹಿತಿ ಬಂದಿದೆ. ಅವರನ್ನು ಒತ್ತಡದ ಹಾಕಿ ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆಯೋ ಎಂಬುದು ಗೊತ್ತಿಲ್ಲ. ಅವರ ಹೇಳಿಕೆ ನೋಡಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.










