ಜಗದೀಶ್ ಶೆಟ್ಟರ್ ಹೇಳಿಕೆ ಸರಿಯಲ್ಲ : ಸಿಎಂ ಬೊಮ್ಮಾಯಿ

56
firstsuddi

ಬಾಗಲಕೋಟೆ : ನನಗೆ ಟಿಕೆಟ್ ಕೈತಪ್ಪಲು ಬಿ ಎಲ್ ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದರು. ಶೆಟ್ಟರ್  ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಜಗದೀಶ್ ಶೆಟ್ಟರ್ ಹೇಳಿಕೆ ಸರಿಯಲ್ಲ. ನಾವು ರಾಜ್ಯಮಟ್ಟದಿಂದ ಅವರ ಹೆಸರನ್ನು ಕಳುಹಿಸಿದ್ದೆವು. ಮೇಲ್ಮಟ್ಟದಲ್ಲಿ ಒಂದು ನೀತಿಯ ಮೇಲೆ ಟಿಕೆಟ್ ಫೈನಲ್ ಮಾಡಿದ್ದಾರೆ. ಈಗಾಗಲೇ ಆ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಅವರ ಆರೋಪದ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಸಚಿವ ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋದಲ್ಲಿ ಭಾಗವಹಿಸಲು ಮುಧೋಳ ನಗರಕ್ಕೆ ಆಗಮಿಸಿದ ಬೊಮ್ಮಾಯಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದರಿಂದ ಲಿಂಗಾಯತ ಮತಗಳಿಗೆ ಪೆಟ್ಟು ಬೀಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜಕಾರಣದ ಲಿಂಗಾಯತರು ಜಾಗೃತ ಮತದಾರರಿದ್ದಾರೆ. ಯಾವಾಗ ಯಾವ ನಿರ್ಣಯ ತೆಗೆದುಕೊಂಡಿದ್ದಾರೋ ಸರಿಯಾಗಿಯೇ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆ ಹತ್ತಿರ ಬಂದಾಗ ಲಿಂಗಾಯತರಿಗೆ ಬಹಳ ಪ್ರೀತಿ ತೋರಿಸುತ್ತಿದೆ ಎಂದು ಟಾಂಗ್ ನೀಡಿದರು.

2ಎ ಮೀಸಲಾತಿ ಕೊಡುವುದಕ್ಕೆ ವಿರೋಧ ಮಾಡಿದವರು, 2009ರಲ್ಲೇ ಸೇರಿಸಬೇಕೆಂದಾಗ ಆಗಲೂ ವಿರೋಧ ಮಾಡಿದರು. 2016ರಲ್ಲಿ ಅದನ್ನು ತಿರಸ್ಕರಿಸಿದರು. ಈಗ ನಾವು ಸೇರಿಸಿದ ಮೇಲೆ ಕುಮ್ಮಕ್ಕು ಕೊಟ್ಟು, ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಿಸಿದ್ದಾರೆ ಎಂದರು.

ಬಿಜೆಪಿ ಕೆಲವೇ ಕೆಲವು ಜನರ ಕಪಿಮುಷ್ಟಿಯಲ್ಲಿದೆ ಎಂಬ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ನಮ್ಮದು ರಾಷ್ಟ್ರೀಯ ಪಕ್ಷ. ಸರ್ವೋಚ್ಚ ನಾಯಕ ನರೇಂದ್ರ ಮೋದಿಯವರಲ್ಲಿ ಅತ್ಯಂತ ಪ್ರಜಾಪ್ರಭುತ್ವವಾಗಿದೆ ಎಂದರು.