ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ!

84
firstsuddi

ಹಾಸನ: ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ದುಷ್ಕರ್ಮಿಗಳು, ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಳಲಿ ದೇವಸ್ಥಾನದ ಬಳಿ ನಡೆದಿದೆ.

ಯಸಳೂರು ಪೊಲೀಸ್ ಠಾಣೆಯ ಶರತ್ ಹಲ್ಲೆಗೊಳಗಾದ ಕಾನ್ಸ್‌ಟೇಬಲ್. ಜೂನ್ 15 ರಂದು ಸಾಂದರ್ಭಿಕ ರಜೆ ಪಡೆದು ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಶರತ್ ಬಂದಿದ್ದರು. ದೇವಸ್ಥಾನದ ಬಳಿಯಿರುವ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬ ಯುವಕನಿಗೆ ಗ್ರಾಮದ ಯುವಕರ ಗುಂಪು, ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುತ್ತಿತ್ತು. ಇದನ್ನು ಗಮನಿಸಿದ ಶರತ್ ಜಗಳ ಬಿಡಿಸಲು ಮುಂದಾಗಿದ್ದಾನೆ. ಆದರೆ ಯುವಕರ ಗುಂಪು ರೊಚ್ಚಿಗೆದ್ದು ಜಗಳ ಬಿಡಿಸಲು ಬಂದ ಶರತ್‍ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಪೇದೆ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಿಥುನ್, ಲೋಹಿತ್, ನಟರಾಜು ಹಾಗೂ ಇತರರ ಗುಂಪು ಕಾನ್ಸ್‌ಟೇಬಲ್ ಶರತ್ ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದೆ. ಕಲ್ಲಿನಿಂದ ಶರತ್ ತಲೆಗೆ ಹೊಡೆದಿದ್ದಾರೆ, ಬಳಿಕ ನಟರಾಜ ಕಾರಿನಿಂದ ಲಾಂಗ್ ತಂದು ಅದರಿಂದಲೂ ಹಲ್ಲೆ ಮಾಡಿದ್ದಾನೆ. ಈ ವೇಳೆ ದಾಳಿಯಿಂದ ತಪ್ಪಿಸಿಕೊಂಡ ಕಾನ್ಸ್‌ಟೇಬಲ್ ಶರತ್ ಕನ್ವೆನ್ಷನ್ ಹಾಲ್ ಒಳಗೆ ಓಡಿ ಹೋಗಿದ್ದಾರೆ. ಆದರೆ ಶರತ್ ಬೆನ್ನಟ್ಟಿದ ದುಷ್ಕರ್ಮಿಗಳು ಕನ್ವೆನ್ಷನ್ ಹಾಲ್‌ಗೆ ನುಗ್ಗಿ ಲಾಂಗ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಗಂಭೀರ ಗಾಯಗೊಂಡ ಕಾನ್ಸ್‌ಟೇಬಲ್ ಶರತ್ ಹಾಲ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಗಾಯಾಳು ಶರತ್‍ಗೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.