ಚಿಕ್ಕಮಗಳೂರು : ಕರ್ತವ್ಯದ ಅವಧಿಯಲ್ಲಿ ಜನಪರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಡಿವೈಎಸ್ಪಿ ಪ್ರಭು ಹೇಳಿದರು.
ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬಿಎಸ್ಪಿ ಮತ್ತು ಜಿಲ್ಲಾ ಸಹೋದರತ್ವ ಸಮಿತಿ ನಗರದ ಪ್ರವಾಸಿ ಮಂದಿರದಲ್ಲಿ ನಿನ್ನೆ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.
ಅಧಿಕಾರ, ಅಂತಸ್ತು ಅಥವಾ ಹಣದಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ನಾವು ಜನಪರವಾಗಿ ಕೆಲಸ ಮಾಡಿದರೆ ಮಾತ್ರ ಅವರು ನಮ್ಮನ್ನು ಗುರುತಿಸಿ ಗೌರವಿಸುತ್ತಾರೆ ಹಾಗಾಗಿ ಅಧಿಕಾರಿಗಳು ತಮಗೆ ದೊರೆತ ಅಧಿಕಾರವನ್ನು ಜನರ ಸೇವೆಗೆ ದೊರೆತ ಅವಕಾಶವೆಂದು ಭಾವಿಸಬೇಕು, ಬಡವರು, ನಿರ್ಗತಿಕರು ಅಸಹಾಯಕರು ಮತ್ತು ನೊಂದವರಿಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.
ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಡಿವೈಎಸ್ಪಿ ಪ್ರಭು ಅವರು ಜನಾನುರಾಗಿಯಾಗಿ, ಜನಸ್ನೇಹಿಯಾಗಿ, ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಪ್ರಭು ಅವರು ನೊಂದವರ ಪರವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಪ್ರಭು ಅವರು ನೊಂದವರು ಮತ್ತು ಶೋಷಿತರ ಪರವಾಗಿ ಕೆಲಸ ಮಾಡುತ್ತಿದ್ದರು, ಅತ್ಯಂತ ಸಂಯಮ ಮತ್ತು ತಾಳ್ಮೆಯಿಂದ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುತ್ತಿದ್ದರು ಎಂದು ಹೇಳಿದರು.
ಬಹುಜನ ಸಮಾಜ ಪಕ್ಷ ಮತ್ತು ಜಿಲ್ಲಾ ಸಹೋದರತ್ವ ಸಮಿತಿಯಿಂದ ಡಿವೈಎಸ್ಪಿ ಪ್ರಭು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ. ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಸಹೋದರತ್ವ ಸಮಿತಿಯ ಸಂಯೋಜಕಿ ಕೆ.ಎಸ್.ಮಂಜುಳಾ, ಶೋಭಾ, ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್, ಉಪನ್ಯಾಸಕ ಸುರೇಶ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ್ ಉಪಸ್ಥಿತರಿದ್ದರು.










