ಶ್ರೀನಗರ : ಬಿಜೆಪಿ ಪುರಸಭೆಯ ಸದಸ್ಯನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.
ರಾಕೇಶ್ ಪಂಡಿತ್ ಗುಂಡಿಗೆ ಬಲಿಯಾದ ಬಿಜೆಪಿ ಕೌನ್ಸಿಲರ್. ತನ್ನ ಸ್ನೇಹಿತನನ್ನು ಭೇಟಿಯಾಗಲು ರಾಕೇಶ್ ಪಂಡಿತ್ ಅವರು ಟ್ರಾಲ್ ಪಯೀನ್ ಗೆ ಬಂದಿದ್ದ ವೇಳೆ ಮೂವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ರಾಕೇಶ್ ಪಂಡಿತ್ ಸಾವನ್ನಪ್ಪಿದ್ದು, ಅವರ ಸ್ನೇಹಿತನ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ರಾಕೇಶ್ ಪಂಡಿತ್ ಅವರು ಶ್ರೀನಗರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ಅವರಿಗೆ ಇಬ್ಬರು ಭದ್ರತಾ ಪಡೆಗಳನ್ನು ಒದಗಿಸಲಾಗಿತ್ತು. ಆದರೆ ಟ್ರಾಲ್ ಗೆ ತೆರಳುತ್ತಿದ್ದ ವೇಳೆ ಭದ್ರತಾ ಪಡೆಗಳನ್ನು ರಾಕೇಶ್ ಪಂಡಿತ್ ಅವರು ಕರೆದೊಯ್ದಿರಲಿಲ್ಲ ಎಂದು ತಿಳಿದುಬಂದಿದೆ. ಪ್ರಕರಣ ಕುರಿತಂತೆ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು, ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಅವರು, ಬಿಜೆಪಿ ಕಾರ್ಯಕರ್ತ ರಾಕೇಶ್ ಪಂಡಿತ್ ಅವರ ಬಲಿಯನ್ನು ವ್ಯರ್ಥವಾಗಲು ಬಿಡುವುದಿಲ್ಲ. ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದಕರ ನಿರ್ಮೂಲನೆ ಮಾಡಲಾಗುವುದು. ಎಂದು ಹೇಳಿದ್ದಾರೆ.
ಪುಲ್ವಾಮಾದ ಟ್ರಾಲ್ ಮಿನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್ ಅವರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ವಿಚಾರ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.










