ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೌಧರಿ ಗುಂಡ್ ಗ್ರಾಮದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಟ್ಟು ಕೊಂದಿದ್ದಾರೆ.
ಪುರನ್ ಕೃಷನ್ ಭಟ್ ಎಂಬುವರು ಕೊಲೆಯಾದ ಕಾಶ್ಮೀರಿ ಪಂಡಿತ. ಅವರ ನಿವಾಸದಲ್ಲಿಯೇ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುರನ್ ಕೃಷನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರಿಗೆ 11 ವರ್ಷದ ಮಗಳು ಹಾಗೂ 8 ವರ್ಷದ ಮಗನಿದ್ದಾನೆ.
ಉಗ್ರರ ದಾಳಿಗೆ ಒಳಗಾದ ಪುರನ್ ಕೃಷನ್ ಭಟ್ ಅವರನ್ನು ಶೋಪಿಯಾನ್ ನ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.
ಈ ಪ್ರದೇಶದಲ್ಲಿ ಪೊಲೀಸ್ ಬಿಗಿ ಕಾವಲು ಹಾಕಲಾಗಿದೆ. ಭಯೋತ್ಪಾದಕರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಣಿವೆ ರಾಜ್ಯದಲ್ಲಿ ಕಾಶ್ಮೀರಿ ಪಂಡಿತ ಸಮುದಾಯವನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿ ಮಾಡುತ್ತಿದ್ದಾರೆ.










