ಶ್ರೀನಗರ : ಎರಡು ಬಸ್ ಗಳು ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿರುವ ಘಟನೆ ಸಾಂಬಾ ಜಿಲ್ಲೆಯ ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಓವರ್ ಟೇಕ್ ಮಾಡಲು ಚಾಲಕ ಪ್ರಯತ್ನಿಸುವಾಗ ಅತಿವೇಗದಿಂದ ಅಪಘಾತ ಸಂಭವಿಸಿದೆ. ಒಂದು ಬಸ್ ಸಹರಾನ್ ಪುರಕ್ಕೆ ತೆರಳುತ್ತಿದ್ದರೆ ಇನ್ನೊಂದು ಬಸ್ ಕಥುವಾ ಜಿಲ್ಲೆಗೆ ಪ್ರಯಾಣಿಸುತ್ತಿತ್ತು. ಮೃತರನ್ನು ಪಂಜಾಬ್ ನ ಬಟಾಲಾ ಮೂಲದ ಮಂಗಿ ದೇವಿ (36), ಅವರ ಮಗಳು ತಾನಿಯಾ(14) ಮತ್ತು ರಾಜ್ಪುರದ ಕಸ್ತೂರಿ ಲಾಲ್(58) ಎಂದು ಗುರುತಿಸಲಾಗಿದೆ.
ಸಾಂಬಾ ಜಿಲ್ಲಾಡಳಿತವು ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಹಾಗೂ ಸಣ್ಣಪುಟ್ಟ ಗಾಯವಾದವರಿಗೆ 10 ಸಾವಿರ ರೂ. ಪರಿಹಾರ ಘೋಷಿಸಿದೆ.
ಘಟನೆ ಕುರಿತಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂತಾಪ ವ್ಯಕ್ತಪಡಿಸಿದ್ದು, ದೋಡಾ ಮತ್ತು ಸಾಂಬಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಂಟಾದ ಜೀವಹಾನಿಯಿಂದ ತೀವ್ರ ನೋವಾಗಿದೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.










