ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ಜನರ ಮನಸ್ಥಿತಿ ಬದಲಾಗಬೇಕು : ಕೆ.ಬಿ.ಸುಧಾ

73
firstsuddi

ಚಿಕ್ಕಮಗಳೂರು : ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ, ಅಸಮಾನತೆ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ಬಹುಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಸಲಹೆ ನೀಡಿದರು.

ಬಿಎಸ್‍ಪಿ ವಿಧಾನಸಭಾ ಕ್ಷೇತ್ರ ಸಮಿತಿ ನಗರದ ಪಕ್ಷದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕೋರೇಗಾವ್ ವಿಜಯೋತ್ಸವ ಮತ್ತು ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಇನ್ನೂ ಸಹ ರಾಷ್ಟ್ರದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಜಾತಿ ವ್ಯವಸ್ಥೆ, ದೌರ್ಜನ್ಯ, ಶೋಷಣೆ ಮುಂದುವರೆದಿವೆ, ಇದಕ್ಕೆ ಮೂಲ ಕಾರಣ ಬಹುಜನರ ಒಗ್ಗಿಕೊಳ್ಳುವ ಮನಸ್ಥಿತಿ ಎಂದರು.

ಈ ಪರಿಸ್ಥಿತಿ ಬದಲಾಗಬೇಕಾದರೆ ಬಹುಜನರು ಕೋರೇಗಾವ್ ವೀರರು ಮತ್ತು ಸಾವಿತ್ರಿಬಾಯಿ ಪುಲೆ ಅವರಂತೆ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಲ್ಲರೂ ಒಗ್ಗೂಡಿ ಬಲಿಷ್ಠರಾಗಬೇಕು ಎಂದು ಕಿವಿಮಾತು ಹೇಳಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ ಸಾವಿತ್ರಿಬಾಯಿ ಪುಲೆ ಮತ್ತು ಕೋರೇಗಾವ್ ವೀರರ ಆದರ್ಶಗಳನ್ನು ಬಹುಜನರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜೀವನ ಮತ್ತು ಸಂದೇಶಗಳ ಕುರಿತು ಬಿಎಸ್‍ಪಿ ವಿಧಾನಸಭಾ ಕ್ಷೇತ್ರ ಸಮಿತಿಯ ಖಜಾಂಚಿ ನವೀನ್, ಕಾರ್ಯದರ್ಶಿ ವಿನೀತ್ ಉಪನ್ಯಾಸ ನೀಡಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ವಸಂತ, ಸಂಯೋಜಕಿ ಕೆ.ಎಸ್.ಮಂಜುಳಾ, ಗಿರೀಶ್, ರತ್ಮಮ್ಮ, ರವಿಕುಮಾರ್, ಧನಂಜಯ ಉಪಸ್ಥಿತರಿದ್ದರು.