ಚಿಕ್ಕಮಗಳೂರು: ಜಾನಪದ ಭಾರತೀಯರ ಸಾಂಸ್ಕೃತಿಕ ಬದುಕಿನ ತಳಹದಿಯಾಗಿದೆ. ಅವರ ನಡೆ, ನುಡಿ, ಆಚಾರ-ವಿಚಾರಗಳಲ್ಲಿ ಹಾಸುಹೊಕ್ಕಾಗಿದೆ ಎಂದು ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ಅಜ್ಜಂಪುರ ತಾಲೂಕಿನ ನಾರಣಾಪುರದಲ್ಲಿ ಕರ್ನಾಟಕ ಜಾನಪದ ಪರಿಷತ್ ನಿನ್ನೆ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಭಾರತೀಯ ಸಂಸ್ಕೃತಿಯ ತಾಯಿ ಬೇರು, ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಅದನ್ನು ಇಂದಿನ ಪೀಳಿಗೆ ಜತನದಿಂದ ಕಾಪಾಡಬೇಕು ಹಾಗಾದರೆ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದರು.
ಸರ್ಕಾರ ಜಾನಪದ ಕಲಾವಿದರ ಸಮಸ್ಯೆಗಳಿಗೆ ಸ್ಫಂದಿಸಬೇಕು. ಎಲೆಮರೆ ಕಾಯಿಯಂತೆ ಬದುಕುತ್ತಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕು. ಕಲೆ, ಸಾಹಿತ್ಯ, ಸಂಗೀತಕ್ಕೆ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಮಾತನಾಡಿ, ಸಮಾಜದ ಹುಟ್ಟು, ಬೆಳವಣಿಗೆ, ನಿಯಮಗಳು, ಆಚರಣೆ, ಧಾರ್ಮಿಕ ಪದ್ಧತಿ ಮುಂತಾದವುಗಳಿಗೆ ರೂಪ ಕೊಟ್ಟಿರುವುದೇ ಜಾನಪದ ಎಂದರು.
ಜಾನಪದ ಸಂಸ್ಕೃತಿ ಭಾರತೀಯ ಸಂಸ್ಕೃತಿ, ಅದು ಶಾಶ್ವತವಾಗಿ ಉಳಿಯಬೇಕಾದರೆ, ಅದನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ಸರ್ಕಾರ ಜಾನಪದದತ್ತ ಮುಖ ಮಾಡಬೇಕು ಎಂದು ಸಲಹೆ ಮಾಡಿದರು.
ರಂಗ ಸಂಘಟಕ ಎ.ಸಿ. ಚಂದ್ರಪ್ಪ ಜಾನಪದ ಧ್ವಜಾರೋಹಣ ನೆರವೇರಿಸಿದರು. ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಇ.ಮಹಾಲಿಂಗಪ್ಪ, ಪರಿಷತ್ತಿನ ಉಪಾಧ್ಯಕ್ಷ ಜಿ.ಎಸ್. ತಿಪ್ಪೇಶ್ ಮಾತನಾಡಿದರು.
ಎ.ಆರ್. ನಾಗೇಶ್, ಶಕುಂತಲಮ್ಮ ತಂಡದಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ನಟರಾಜ್, ನವೀನ್, ಜಯಶೀಲ, ಜ್ಞಾನಮೂರ್ತಿ, ಬೆಣಕುಣಸೆ ಮರುಳಸಿದ್ಧಪ್ಪ, ಮುಗುಳಿ ಲಕ್ಷ್ಮೀದೇವಮ್ಮ, ಗಂಗಾಧರಯ್ಯ, ಹಾಲಯ್ಯ, ಎಚ್.ಆರ್. ಚಂದ್ರಪ್ಪ ಉಪಸ್ಥಿತರಿದ್ದರು.










