ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ದಲಿತ ಸಿಎಂ : ಹೆಚ್‍ಡಿಕೆ.

76
firstsuddi

ತುಮಕೂರು: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತ ಸಿಎಂ ಮಾಡಲು ನಾವು ತಯಾರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನಿನ್ನೆ ಪಂಚರತ್ನ ರಥಯಾತ್ರೆ ನಗರಕ್ಕೆ ಪ್ರವೇಶ ಮಾಡಿದೆ. ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಬಗ್ಗೆ ಅಭಿಮಾನ ಇಟ್ಕೊಂಡಿರೋ ಸಿದ್ದರಾಮಯ್ಯ ಏನ್ ಮಾತಾಡಿದ್ದಾರೆ ದಾಖಲೆ ಕೊಡ್ಲ? ಅಸ್ಪಶ್ಯರ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ದಲಿತ ಮಹಿಳೆಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿರಿಸಿಕೊಂಡಿದ್ದೆ. ಯಾವ ಮುಖ್ಯಮಂತ್ರಿ ಈ ರೀತಿ ಮಾಡಿದ್ದಾರೆ ಹೇಳಲಿ ಎಂದು ಎಂದು ಸಿದ್ದು ವಿರುದ್ಧ ಗುಡುಗಿದರು.

ನಮಗೆ 123 ಸ್ಥಾನ ಬಂದರೆ ದಲಿತ ಮುಖ್ಯಮಂತ್ರಿಯನ್ನು ಏಕೆ ಮಾಡಬಾರದು ಎಂದು ಪ್ರಶ್ನಿಸಿದ ಹೆಚ್.ಡಿ.ಕುಮಾರಸ್ವಾಮಿ ದಲಿತರನ್ನ ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ದೇವೆಗೌಡರು ಮೀಸಲಾತಿ ಇಲ್ಲದೇ ಇದ್ದಾಗ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನು ಯಾರೂ ಮರೆಯಬಾರದು. ನಮ್ಮ ಪಕ್ಷಕ್ಕೆ ದಲಿತರ ವಿಚಾರದಲ್ಲಿ ಬದ್ಧತೆಯಿದೆ ಎಂದರು.

ನಾವು ಪಂಚರತ್ನ ಯಾತ್ರೆ ಬಗ್ಗೆ ನಿನ್ನೆ ಮೊನ್ನೆ ತಿರ್ಮಾನ ಮಾಡಿಲ್ಲ. ಕೋವಿಡ್ ಗಿಂತಲೂ ಮೊದಲೇ ಈ ಕುರಿತು ತಿರ್ಮಾನ ಮಾಡಲಾಗಿತ್ತು. ಪಂಚಭೂತಗಳೇ ನಮ್ಮ ಭೂಮಿಯನ್ನ ಕಾಪಾಡುತ್ತಿವೆ. ದೇಹಕ್ಕೆ ಪಂಚೇಂದ್ರಿಯಗಳು ಮುಖ್ಯವೋ ಅದೇ ರೀತಿ ನಾಡಿಗೆ ಪಂಚರತ್ನ ಕಾರ್ಯಕ್ರಮಗಳು ಮುಖ್ಯ ಎಂದು ವಿವರಿಸಿದರು.

ಸಮಾಜದಲ್ಲಿ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಇಡೀ ನಾಡಿನ ಜನತೆಗೆ ತಲುಪಿಸಬೇಕಿದೆ. ಬದುಕಿನ ಹೊಸ ಹಾದಿಯಲ್ಲಿ ಹೋಗಲು ಈ ಯೊಜನೆಯಿಂದ ಅನುಕೂಲವಾಗುತ್ತೆ. ಜನತೆಯ ಅಲೆ ಬಗ್ಗೆ ನಾನೇ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಐತಿಹಾಸಿಕ ದಾಖಲೆ ನಿರ್ಮಾಣ ಆಗ್ತಿದೆ. ರಾತ್ರಿ 11, 12 ಗಂಟೆಯಾದ್ರು ಮಹಿಳೆಯರೆಲ್ಲಾ ಸಭೆಗಳಿಗೆ ಬರುತ್ತಿದ್ದಾರೆ. ಇದನ್ನೆಲ್ಲಾ ನೊಡಿದರೆ ನನ್ನ ಮೇಲಿರುವ ನಂಬಿಕೆ ನನಗೆ ಜಾಸ್ತಿಯಾಗುತ್ತಿದೆ. ನಾಡಿನ ಜನತೆಗೆ ನಾನು ಕೇಳೋದು ಇಷ್ಟೇ. ಐದು ವರ್ಷ ಅಧಿಕಾರ ಮಾಡಲು ಒಂದು ಅವಕಾಶ ಕೊಡಿ. ಜನತೆಯ ಪ್ರೀತಿ, ವಿಶ್ವಾಸದ ಅಲೆಯಲ್ಲಿ ನನ್ನ ದೈಹಿಕ ಶ್ರಮವನ್ನು ಸಂಪೂರ್ಣವಾಗಿ ಮರೆಯುತ್ತೇನೆ ಎಂದರು.