ಜೈ ಶ್ರೀರಾಮ್ ಹೇಳಲು ನಿರಾಕರಿಸಿದ್ದಕ್ಕೆ ಬಾಲಕನಿಗೆ ಥಳಿತ…

52
firstsuddi

ಭೋಪಾಲ್ : ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ 10 ವರ್ಷದ ಮುಸ್ಲಿಂ ಬಾಲಕನಿಗೆ ಥಳಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ನಿನ್ನೆ ಸಂಜೆ ಮಧ್ಯಪ್ರದೇಶದ ಖಾಂಡ್ವಾದ ಪಂಧನಾ ಪ್ರದೇಶದಲ್ಲಿ ಬಾಲಕ ಪಾಠಕ್ಕಾಗಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಜಯ್ ಭಿಲ್ ಎಂದು ಗುರುತಿಸಲಾದ ಆರೋಪಿ ಬಾಲಕನನ್ನು ತಡೆದು ಜೈ ಶ್ರೀ ರಾಮ್ ಎಂದು ಹೇಳಲು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಆರಂಭದಲ್ಲಿ ಬಾಲಕ ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ವ್ಯಕ್ತಿ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಹೆದರಿದ ಆ ಬಾಲಕ ಭಯದಿಂದ ಜೈ ಶ್ರೀರಾಮ್ ಎಂದು ಹೇಳಿದ್ದಾನೆ. ಬಳಿಕ ಆರೋಪಿ ಆತನನ್ನು ಹೋಗಲು ಬಿಟ್ಟಿದ್ದಾನೆ.

ಭಯಭೀತನಾದ ಹುಡುಗ ಮನೆಗೆ ಹಿಂತಿರುಗಿ ತನ್ನ ಪೋಷಕರಿಗೆ ನಡೆದ ವಿಷಯವನ್ನು ವಿವರಿಸಿದ್ದಾನೆ. ಬಾಲಕನ ತಂದೆ ತಕ್ಷಣ ಪಂಧನಾ ಪೊಲೀಸ್ ಠಾಣೆಗೆ ತೆರಳಿ ತನ್ನ ಮಗನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಅಜಯ್ ಭಿಲ್ ವಿರುದ್ಧ ಐಪಿಸಿ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಆಕ್ರೋಶ ಅಥವಾ ಅವಮಾನ) ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.