ಬೆಂಗಳೂರು: ಜೈನಮುನಿ ಹಾಗೂ ಹಿಂದೂ ಕಾರ್ಯಕರ್ತನ ಹತ್ಯೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ರಾಜ್ಯ ಬಿಜೆಪಿ ವತಿಯಿಂದ ರಾಜಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.
ತಂಡಗಳ ರಚನೆ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯನ್ನು ಖಂಡಿಸಿ ರಾಜಾಧ್ಯಕ್ಷ ನಳಿನ್‍ಕುಮಾರ್ ಕಟೀಲು ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದು, ಹತ್ಯೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲಿಸಲು ಬೆಳಗಾವಿಗೆ ಒಂದು ತಂಡ ಹಾಗೂ ಮೈಸೂರು ಜಿಲ್ಲೆಗೆ ಒಂದು ತಂಡವನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂದು ಜೈನಮುನಿ ಹತ್ಯೆಯಾದ ಸ್ಥಳಕ್ಕೆ ನಳಿನ್ ಕುಮಾರ್ ಕಟೀಲು ನೇತೃತ್ವದ 11 ಜನರ ತಂಡ ಭೇಟಿ ನೀಡಲಿದೆ. ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಲಿದೆ. ಜೈನಮುನಿಗಳ ಪೂರ್ವಾಶ್ರಮದ ಸಂಬಂಧಿಗಳೊಂದಿಗೆ ಬಿಜೆಪಿ ತಂಡ ಮಾತುಕತೆ ನಡೆಸಲಿದೆ. ನಳಿನ್ ಕುಮಾರ್ ಕಟೀಲು ತಂಡದಲ್ಲಿ ಅಶ್ವಥ್ ನಾರಾಯಣ, ಮಹೇಶ ತೆಂಗಿನಕಾಯಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲ ಅಂಗಡಿ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಅನೀಲ್ ಬೆನಕೆ ಸೇರಿ 11 ಜನ ಇದ್ದಾರೆ.
ಹಾಗೂ ಟಿ.ನರಸೀಪುರದ ಶ್ರೀರಾಂಪುರ ಕಾಲೋನಿಯಲ್ಲಿನ ವೇಣುಗೋಪಾಲ್ ನಿವಾಸಕ್ಕೆ ಸಿ.ಟಿ.ರವಿ ನೇತೃತ್ವದ 10 ಜನರ ತಂಡ ಭೇಟಿ ನೀಡಲಿದ್ದಾರೆ. ತಂಡದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಮಾಜಿ ಶಾಸಕರಾದ ಎನ್.ಮಹೇಶ್, ಪ್ರೀತಮ್ ಗೌಡ, ಅರಣ್ಯ ವಸತಿ ಮತ್ತು ವಿಹಾರ ನಿಗಮದ ಮಾಜಿ ಅಧ್ಯಕ್ಷ ಅಪ್ಪಣ್ಣ, ಮಾಜಿ ಎಂಎಲ್‌ಸಿ ಪ್ರೊ.ಮಲ್ಲಿಕಾರ್ಜುನ, ಬಿಜೆಪಿ ವಿಭಾಗ ಪ್ರಭಾರಿ ರವಿಶಂಕರ್ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್ ಭೇಟಿ ನೀಡಲಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮಾಡಲಾಗಿದೆ. ಮತ್ತೊಂದೆಡೆ ಮೈಸೂರು ಜಿಲ್ಲೆ ಟಿ ಟಿ. ನರಸೀಪುರದಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಆದ ಕ್ಷುಲ್ಲಕ ವಿಚಾರದ ಗಲಾಟೆಯಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ನನ್ನು ಕೊಲೆ ಮಾಡಲಾಗಿದೆ. ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ ಸದಸ್ಯರು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.










