ಜೋಧ್​​ಪುರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ; ಇಂಟರ್​ನೆಟ್ ಸೇವೆ ಸ್ಥಗಿತ…

71
firstsuddi

ಜೈಪುರ : ರಾಜಾಸ್ಥಾನದ ಜೋದ್‌ಪುರದ ಜಲೋರಿ ಗೇಟ್ ಬಳಿ ಮುಸ್ಲಿಂ ಧ್ವಜ ಅಳವಡಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ನಿನ್ನೆ ಇಲ್ಲಿನ ಜಲೋರಿ ಗೇಟ್ ಬಳಿಯಿದ್ದ ಮುಸ್ಲಿಂ ಧ್ವಜ ಹಾಗೂ ಬ್ಯಾನರ್ ಗಳನ್ನು ಅಳವಡಿಸುವ ವಿಚಾರಕ್ಕೆ ವಿವಾದ ಏರ್ಪಟ್ಟಿದೆ. ಗಲಾಟೆಯ ಸುದ್ದಿ ತಿಳಿದ ರಾಜಸ್ಥಾನ ಸಶಸ್ತ್ರ ಪಡೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡು ಗಂಪುಗಳನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಆದರೆ, ತಡರಾತ್ರಿ ಮತ್ತೆ ಎರಡೂ ಗಂಪುಗಳು ಮರಳಿ ಬಂದು ವಾಗ್ವಾದ ನಡೆಸಿವೆ. ಎರಡೂ ಸಮಯದಾಯದ ಜನರಿಂದಲೂ ಕಲ್ಲು ತೂರಾಟ ನಡೆದಿದ್ದು, ವಾಹನಗಳಿಗೆ ಹಾನಿಯಾಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ನಂತರ ಅಶ್ರುವಾಯು ಪ್ರಯೋಗ ಮಾಡಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸದ್ಯ ಜಲೋರಿ ಗೇಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಹಾಕಿ ಬಂದ್ ಮಾಡಲಾಗಿದೆ.

ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎರಡು ಗುಂಪುಗಳ ನಡುವಿನ ಗಲಾಟೆ ದುರದೃಷ್ಟಕರ. ಸ್ಥಳದಲ್ಲಿ ಶಾಂತಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜತೆಗೆ ಕಾನೂನು ಹಾಗೂ ಸುವ್ಯವಸ್ಥೆ ಸ್ಥಾಪಿಸಲು ಎಲ್ಲ ಪಕ್ಷದವರು ಸಹಕಾರ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.