ಟೂತ್ ಪೇಸ್ಟ್ ಎಂದು ಇಲಿ ವಿಷದಿಂದ ಹಲ್ಲುಜ್ಜಿ ಯುವತಿ ಸಾವು…

69
firstsuddi

ಧಾರಾವಿ(ಮಹಾರಾಷ್ಟ್ರ): ಟೂತ್ ಪೇಸ್ಟ್ ಎಂದು ತಿಳಿದು ಇಲಿ ವಿಷದಿಂದ ಹಲ್ಲುಜ್ಜಿದ ಪರಿಣಾಮ ಯುವತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧಾರಾವಿಯಲ್ಲಿ ನಡೆದಿದೆ.

ಅಫ್ಸಾನಾ ಖಾನ್ ಎಂಬ 18 ವರ್ಷದ ಯುವತಿ ನಿದ್ದೆ ಕಣ್ಣಿನಲ್ಲಿ ಟೂತ್ ಪೇಸ್ಟ್ ಬದಲಿಗೆ ಅದರ ಪಕ್ಕದಲ್ಲಿದ್ದ ಇಲಿ ವಿಷವನ್ನು ಬ್ರಷ್ಗೆ ಹಾಕಿ ಹಲ್ಲುಜ್ಜಿದ್ದಾಳೆ. ಈ ವೇಳೆ ರುಚಿಯಿಂದ ವ್ಯತ್ಯಾಸ ಅರಿತು ತಕ್ಷಣವೇ ಅದನ್ನು ಉಗುಳಿ, ಬಾಯಿಯನ್ನು ತೊಳೆದುಕೊಂಡಿದ್ದಾಳೆ. ಆದರೆ ಕೆಲ ಹೊತ್ತಿನಲ್ಲಿ ಆಕೆಗೆ ತಲೆತಿರುಗಲು ಶುರುವಾಗಿದೆ. ಈ ವೇಳೆ ಮನೆಯವರಿಗೆ ಹೇಳದೆ ಸುಮಾರು ಮೂರು ದಿನಗಳ ಕಾಲ ಮನೆಯಲ್ಲೇ ಇದಕ್ಕೆ ಔಷಧಿ ಸೇವನೆ ಮಾಡಿದ್ದಾಳೆ.

ಆದರೆ ಆಕೆಯ ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದಂತೆ ಮನೆಯಲ್ಲಿ ನಡೆದಿರುವ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಕೆಯ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಾಣಿಸಿಕೊಳ್ಳದ ಕಾರಣ ತಕ್ಷಣವೇ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲೂ ಕೂಡ ಯಾವುದೇ ರೀತಿಯ ಚೇತರಿಕೆ ಕಂಡಿಲ್ಲ. ಎರಡು ದಿನಗಳ ಚಿಕಿತ್ಸೆಯ ನಂತರ, ಅಫ್ಸಾನಾ ಭಾನುವಾರ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.