ಮಂಡ್ಯ : ಟ್ಯೂಶನ್ ಗೆ ಹೋಗಿದ್ದ ಬಾಲಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಟ್ಯೂಶನ್ ಮಾಡುವ ನೆಪದಲ್ಲಿ ಕರೆಸಿಕೊಂಡ ಕಾಂತರಾಜ್ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ಬಹಿರಂಗಗೊಂಡಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಟ್ಯೂಶನ್ ಗೆ ಹೋಗಿದ್ದ ಬಾಲಕಿ ನೀರಿನ ಸಂಪ್ ನಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಳು. ಬೆಳಗ್ಗೆ 11 ಗಂಟೆಗೆ ಟ್ಯೂಶನ್ ಗೆ ಎಂದು ಮನೆಯಿಂದ ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆ ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಬಾಲಕಿ ಪತ್ತೆಯಾಗಿಲ್ಲ. ಇದಾದ ಬಳಿಕ ಪೋಷಕರು ಎಲ್ಲಾ ಕಡೆ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇಷ್ಟಾದರೂ ಸಹ ದಿವ್ಯಾ ಮಾತ್ರ ಪತ್ತೆಯಾಗಿಲ್ಲ.
ಇದಾದ ನಂತರ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ನೀರಿನ ಸಂಪ್ ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ. ಈ ಸಂಬಂಧ ಸೆಕ್ಷನ್ 302 ಪ್ರಕರಣದಡಿ ಮಳವಳ್ಳಿ ಟೌನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಮಂಗಳವಾರ ಟ್ಯೂಶನ್ ಎಷ್ಟು ಗಂಟೆಗಿದೆ ಎಂದು ವಿಚಾರಿಸಲು ಬಾಲಕಿ ಮೇಲ್ವಿಚಾರಕನಿಗೆ ಫೋನ್ ಮಾಡಿದ್ದಳು. ಸಂಜೆ 5 ಗಂಟೆಗೆ ಟ್ಯೂಶನ್ ಇದ್ದರೂ ಬೆಳಗ್ಗೆ 11.30ಕ್ಕೆ ಬರುವಂತೆ ಕಾಂತರಾಜು ಹೇಳಿದ್ದನು. ನಂತರ ಟ್ಯೂಶನ್ ಗೆ ಬಂದ ಬಾಲಕಿ ಮೇಲೆ ಕಾಂತರಾಜು ಅತ್ಯಾಚಾರವೆಸಗಿದ್ದಾನೆ. ಬಳಿಕ ವಿಚಾರ ಬಹಿರಂಗವಾಗುತ್ತದೆ ಎಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯ ಕತ್ತು ಹಿಸುಕಿ, ಬಳಿಕ ಕಲ್ಲಿನಿಂದ ತಲೆಯ ಭಾಗಕ್ಕೆ ಹೊಡೆದು ಹತ್ಯೆಗೈದಿದ್ದಾನೆ. ಕೊಲೆ ನಂತರ ನಿರ್ಮಾಣ ಹಂತದ ಮನೆಯ ಸಂಪ್ ಗೆ ಮೃತದೇಹ ಹಾಕಿ ಪರಾರಿಯಾಗಿದ್ದನು. ನೀಚ ಕೃತ್ಯ ನಡೆಸಿ ತನಗೇನು ಗೊತ್ತೇ ಇಲ್ಲ ಎಂಬಂತೆ ಬಾಲಕಿಯ ಕುಟುಂಬಸ್ಥರ ಜೊತೆ ಸೇರಿ ಆಕೆಗಾಗಿ ಹುಡುಕಾಟ ನಡೆಸಿದ್ದಾನೆ. ನಂತರ ಈ ಪ್ರಕರಣಕ್ಕೆ ಸಂಬಂಧ ಕಾಂತರಾಜು ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.










