ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್‌ ಸೇರಿದಂತೆ ಪ್ರಮುಖರನ್ನು ವಜಾಗೊಳಿಸಿದ ಎಲಾನ್ ಮಸ್ಕ್.

61
firstsuddi

ವಾಷಿಂಗ್ಟನ್ : ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟರ್ ಕಂಪನಿಯನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಸಿಇಒ ಪರಾಗ್ ಅಗರ್ ವಾಲ್, ಟ್ವಿಟರ್ ನ ಸಿಎಫ್ ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಸೇರಿದಂತೆ ಪ್ರಮುಖರನ್ನು ವಜಾ ಮಾಡಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟರ್ ನಿಂದ ಶಾಶ್ವತವಾಗಿ ಗೇಟ್ ಪಾಸ್ ನೀಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಜಯ ಗಡ್ಡೆ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಎಲೋನ್ ಮಸ್ಕ್ ಈ ವರ್ಷದ ಏಪ್ರಿಲ್ 13 ರಂದು ಟ್ವಿಟರ್ ಖರೀದಿಸಿರುವುದಾಗಿ ಘೋಷಿಸಿದ್ದರು. ಪ್ರತಿ ಷೇರಿಗೆ $54.2 ದರದಲ್ಲಿ $44 ಶತಕೋಟಿಗೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂನ್ನು ಖರೀದಿಸಲು ಅವರು ಪ್ರಸ್ತಾಪಿಸಿದ್ದರು. ಆದರೆ ನಂತರ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಕಾರಣ, ಅವರು ಆ ಒಪ್ಪಂದವನ್ನು ಸ್ಥಗಿತಗೊಳಿಸಿದ್ದರು.

ಇದಾದ ಬಳಿಕ ಜುಲೈ 8 ರಂದು, ಮಸ್ಕ್ ಒಪ್ಪಂದವನ್ನು ಮುರಿಯಲು ನಿರ್ಧರಿಸಿದರು. ಇದರ ವಿರುದ್ಧ ಟ್ವಿಟರ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಕ್ಟೋಬರ್ ಆರಂಭದಲ್ಲಿ, ಮಸ್ಕ್ ತನ್ನ ನಿಲುವನ್ನು ಬದಲಾಯಿಸಿದರು ಮತ್ತು ಒಪ್ಪಂದವನ್ನು ಮತ್ತೆ ಪೂರ್ಣಗೊಳಿಸಲು ಒಪ್ಪಿಕೊಂಡರು. ಏತನ್ಮಧ್ಯೆ, ಡೆಲವೇರ್ ನ್ಯಾಯಾಲಯವು ಅಕ್ಟೋಬರ್ 28 ರೊಳಗೆ ಒಪ್ಪಂದವನ್ನು ಪೂರ್ಣಗೊಳಿಸಲು ಆದೇಶಿಸಿತು. ಎಲೋನ್ ಮಸ್ಕ್ ಒಂದು ದಿನ ಮುಂಚಿತವಾಗಿ ಟ್ವಿಟ್ಟರ್ ಕಚೇರಿಗೆ ತಲುಪುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.