ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯ ತಿಥಿಯನ್ನು ಇಂದು ನೆರವೇರಿಸಲಾಗಿದೆ. ಇಂದು ಬೆಳಗ್ಗೆಯಿಂದ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.
ನಿನ್ನೆ ರಾತ್ರಿ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ಮಹಿಳಾ ಅಭಿಮಾನಿಗಳು ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಾವಿರಾರು ದೀಪಗಳನ್ನು ಹಚ್ಚುವ ಮೂಲಕ ಅಗಲಿದ ನಟನ ಸ್ಮರಣೆಯನ್ನು ಮಾಡಿದರು. ಇಂದು ಬೆಳಗ್ಗೆಯಿಂದ ಸಾವಿರಾರು ಅಭಿಮಾನಿಗಳು ಅಭಿಮಾನ ಸ್ಟುಡಿಯೋಗೆ ಹರಿದು ಬಂದಿದ್ದಾರೆ. ಪುಣ್ಯ ಸ್ಮರಣೆ ಅಂಗವಾಗಿ ರಕ್ತದಾನ, ನೇತ್ರದಾನ, ಅನ್ನದಾನದಂಥ ಸಾಮಾಜಿಕ ಕೆಲಸಗಳನ್ನು ಮಾಡಲಾಗುತ್ತಿದೆ.
ಬೆಳಗ್ಗೆ ಹತ್ತು ಗಂಟೆಗೆ ಡಾ.ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಮತ್ತು ಅಭಿಮಾನಿಗಳು ಪೂಜೆ ಸಲ್ಲಿಸಿದರು. ಜೊತೆಗೆ ವಿಷ್ಣುವರ್ಧನ್ ನೆನಪಿನಲ್ಲಿ ಕ್ಯಾಲೆಂಡರ್ ಮತ್ತು ಮೇರುನಟ ಪುಸ್ತಕ ಬಿಡುಗಡೆ ಆದವು. ವಿಷ್ಣುವರ್ಧನ್ ಅವರ ನೆಚ್ಚಿನ ಗೀತೆಗಳನ್ನು ಹಾಡುವ ಮೂಲಕ ಗೀತ ನಮನ ಸಲ್ಲಿಸಲಾಗಿದೆ.
ಪುಣ್ಯ ಸಮಾಧಿಗಾಗಿ ಅಭಿಮಾನಿಗಳು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ, ಸಮಾಧಿ ಬಳಿ ಯಾವುದೇ ಸಮಸ್ಯೆ ಆಗಬಾರದು ಎಂದು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.










