ಡಿಜೆಯಲ್ಲಿ ಕನ್ನಡ, ತಮಿಳು ಹಾಡು ಹಾಕುವ ವಿಚಾರವಾಗಿ ಸ್ನೇಹಿತರ ಮಧ್ಯೆ ಗಲಾಟೆ- ಕೊಲೆಯಲ್ಲಿ ಅಂತ್ಯ…

57
firstsuddi

ಬೆಂಗಳೂರು: ನಗರದಲ್ಲಿ ನಡೆದ ಜಾತ್ರೆಯೊಂದರಲ್ಲಿ ಕನ್ನಡ ಮತ್ತು ತಮಿಳು ಹಾಡುಗಳನ್ನು ಹಾಕುವ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ನಗರದ ಲಿಂಗರಾಜಪುರ ಜಾತ್ರೆಯಲ್ಲಿ ಡಿಜೆಯಲ್ಲಿ ಯಾವ ಹಾಡು ಹಾಕಬೇಕು ಎಂದು ಜಗಳವಾಡಿದ ಹಳೇ ಬಾಗಲೂರು ಲೇಔಟ್ ನಿವಾಸಿ ಪ್ರವೀಣ್ ಎಂಬವರ ಮೇಲೆ ಅವರ ಸ್ನೇಹಿತ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ವೇಳೆ ಪ್ರವೀಣ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್, ಆರ್ಮುಗಂ ಮತ್ತು ಪ್ರಭು ಅವರನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಡಿ ದೇವರಾಜ ತಿಳಿಸಿದ್ದಾರೆ.

ಮೃತ ಪ್ರವೀಣ್ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಈ ಹಿಂದೆಯೂ ಹಲವು ಬಾರಿ ತನ್ನ ಸ್ನೇಹಿತರ ಜತೆ ಜಗಳವಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 2021 ರಲ್ಲಿ, ಪ್ರವೀಣ್ ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿದ್ದರು ಮತ್ತು ಆ ಬಗ್ಗೆ ಎಫ್ಐಆರ್ ದಾಖಲಿಸಲಾಗಿತ್ತು.