ಹೈದರಾಬಾದ್: ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ (ಬಿಆರ್ ಎಸ್) ಶಾಸಕಿ ಜಿ ಲಾಸ್ಯ ನಂದಿತಾ (33) ಅವರು ಸಾವನ್ನಪ್ಪಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್‌ನ ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ಸಂಭವಿಸಿದೆ.
ನಂದಿತಾ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಎಕ್ಸ್‌ಪ್ರೆಸ್‌ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ನಂದಿತಾ ಅವರು ಫೆಬ್ರವರಿ 13 ರಂದು ಬಿಆರ್‌ಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಆದರೆ ಆಕೆ ಸುರಕ್ಷಿತವಾಗಿ ಅಪಘಾತದಿಂದ ಪಾರಾಗಿದ್ದರು. ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಆಕೆ ದಾರುಣವಾಗಿ ಸಾವಿಗೀಡಾಗಿದ್ದಾರೆ. ಶಾಸಕಿಯ ನಿಧನಕ್ಕೆ ಬಿಆರ್‌ಎಸ್ ನಾಯಕರು ಹಾಗೂ ತೆಲಂಗಾಣದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಐದು ಬಾರಿ ಶಾಸಕರಾಗಿದ್ದ ಜಿ.ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ, ಬಿಆರ್ ಎಸ್ ನಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ದುರಂತವೆಂದರೆ, ಕಳೆದ ವರ್ಷ ಇದೇ ತಿಂಗಳಲ್ಲಿ ಆಕೆಯ ತಂದೆ ಸಾಯಣ್ಣ ಮೃತಪಟ್ಟಿದ್ದರು. ಸಾಯಣ್ಣ 2023 ರ ಫೆಬ್ರವರಿ 19ರಂದು ನಿಧನರಾಗಿದ್ದರು. ಇದೀಗ ಅವರ ಮಗಳು 2024 ರ ಫೆಬ್ರವರಿ 23 ರಂದು ನಿಧನರಾಗಿದ್ದಾರೆ. ಇದು ಕುಟುಂಬದವರನ್ನು ತೀವ್ರ ಆಘಾತಕ್ಕೀಡು ಮಾಡಿದೆ.










