ಬೆಂಗಳೂರು : ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಮೇಲೆ ರಾಜಕೀಯ ದುರುದ್ದೇಶದಿಂದ ಐಎನ್‍ಎಕ್ಸ್ ಮೀಡಿಯಾ ಪ್ರಕರಣವನ್ನು ದಾಖಲಿಸಲಾಗಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಗರದ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಕಾನೂನಿನ ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಲಿ. ಅದನ್ನು ಬಿಟ್ಟು ಬೇಕೆಂದೆ ಪ್ರಕರಣವನ್ನು ದಾಖಲಿಸುವುದು ಬೇಡ. ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ ಬಹಳ ತಡವಾಗಿದೆ. ಪಿ.ಚಿದಂಬರಂ ಅವರು ಆರ್ಥಿಕ ತಜ್ಞ, ರಾಜಕೀಯ ಧುರಿಣ ಮತ್ತು ಕಾನೂನು ತಜ್ಞರಾಗಿದ್ದು, ಮೂರು ತಿಂಗಳಿನಿಂದ ಜೈಲುವಾಸ ಮಾಡಬೇಕಾಯಿತು. ಸಾಕ್ಷಿಗಳನ್ನು ಅವರೇನು ನಾಶ ಮಾಡುವುದಿಲ್ಲ. ಚಿದಂಬರಂ ಅವರು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದವರು ಎಂದು ಕೋರ್ಟ್ ಹೇಳಿದೆ ಎಂದರು. ಇದೇ ವೇಳೆ ಉಪಚುನಾವಣೆಯ ಬಗ್ಗೆ ಪ್ರತಿಕ್ರಯಿಸಿದ ಅವರು, ಚುನಾವಣೆಯಲ್ಲಿ ಏನು ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನಿಸುತ್ತೆ. ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದರು. ಇದೇ ವೇಳೆ ದಲಿತ ಮುಖಂಡ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಅವರು, ಡೋಂಟ್ ಕಾಲ್ ದಲಿತ? ಐ ಆ್ಯಮ್ ಎ ಕಾಂಗ್ರೆಸ್ ಮ್ಯಾನ್? ನಾನು50ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನನ್ನು ಒಂದು ಜಾತಿಗೆ ಮೀಸಲಿಡಬೇಡಿ ಎಂದು ಕಿಡಿಕಾರಿದ್ದಾರೆ.










