ಗ್ವಾಲಿಯರ್ : ತಂದೆ ಬೈದಿದ್ದಕ್ಕೆ ಕೋಪಗೊಂಡ 17 ವರ್ಷದ ಬಾಲಕ 21 ಕಬ್ಬಿಣದ ಮೊಳೆಗಳನ್ನು ನುಂಗಿರುವ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಮೊಳೆ ನುಂಗಿದ ಬಾಲಕನನ್ನು ಧನಂಜಯ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಆತನ ತಂದೆ ಯಾವುದೋ ವಿಷಯಕ್ಕೆ ಬೈದಿದ್ದರಂತೆ. ಇದರಿಂದ ಕೋಪಗೊಂಡ ಆತ 21 ಕಬ್ಬಿಣದ ಮೊಳೆಗಳನ್ನು ನುಂಗಿದ್ದಾನೆ. ಅಂದಿನಿಂದ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಬಾಲಕನನ್ನು ಪರೀಕ್ಷೆ ನಡೆಸಿದ ವೈದ್ಯರಿಗೆ ಮೊದಲು ಪರಿಸ್ಥಿತಿ ಏನೆಂಬುದು ಅರ್ಥವಾಗಲಿಲ್ಲ. ಬಳಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವೇಳೆ ಹುಡುಗನ ಹೊಟ್ಟೆಯಲ್ಲಿ ಮೊಳೆಗಳಿರುವುದು ಕಂಡುಬಂದಿದೆ. ಎರಡೂವರೆ ಗಂಟೆಗಳ ಸತತ ಶಸ್ತ್ರಚಿಕಿತ್ಸೆ ನಡೆಸಿ ಮೊಳೆಗಳನ್ನು ಕೊನೆಗೂ ಹೊರತೆಗೆಯಲಾಗಿದೆ. ಹೊಟ್ಟೆಯಲ್ಲಿದ್ದ ಮೊಳೆಗಳನ್ನು ಕಂಡು ವೈದ್ಯರೇ ಒಂದು ಬಾರಿ ಶಾಕ್ ಗೆ ಒಳಗಾಗಿದ್ದಾರೆ. ಸದ್ಯ ಯುವಕ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.










