ಬೆಂಗಳೂರು : ನಟಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕಿ ರೋಜಾ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಇಂಡಿಗೋ ವಿಮಾನದಲ್ಲಿ ರೋಜಾ ಸೇರಿದಂತೆ ಹಲವು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಿನ್ನೆ ಬೆಳಗ್ಗೆ ರಾಜಮಂಡ್ರಿಯಿಂದ ಹೊರಟಿದ್ದ ವಿಮಾನ ಬೆಳಗ್ಗೆ 10:30ಕ್ಕೆ ತಿರುಪತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದ್ದು, ಇದರಿಂದ ಕೆಲವು ಗಂಟೆಗಳ ಕಾಲ ಗೊಂದಲ ಉಂಟಾಗಿದೆ.
ಈ ಕುರಿತು ವಿಮಾನದಲ್ಲೇ ವಿಡಿಯೋ ಮಾಡಿರುವ ರೋಜಾ ಅವರು, ಹವಾಮಾನ ಸಮಸ್ಯೆ ಅಥವಾ ತಾಂತ್ರಿಕ ಸಮಸ್ಯೆಯ ಕಾರಣದಿಂದ ಈ ಅನಾಹುತವಾಗಿದೆಯಾ ಎಂಬುದನ್ನು ಸಂಸ್ಥೆಯ ಯಾವ ಸಿಬ್ಬಂದಿ ಕೂಡ ಸ್ಪಷ್ಟಪಡಿಸಿಲ್ಲ. ವಿಮಾನ ಕಂಪನಿ ಪ್ರಯಾಣಿಕರ ಕಾಳಜಿ ವಹಿಸಿಲ್ಲ. ಸೆಕ್ಯೂರಿಟಿ ನೆಪ ಹೇಳಿ ಪ್ರಯಾಣಿಕರಿಂದ 5 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಇಂಡಿಗೋ ವಿಮಾನಯಾನದ ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ.










