ಭೋಪಾಲ್ : ಷಹಜಹಾನ್ ಮುಮ್ತಾಜ್ ನಿಧನದ ನಂತರ ಪತ್ನಿಯ ಮೇಲಿನ ಪ್ರೀತಿಯ ಸಂಕೇತವಾಗಿ ಆಗ್ರಾದಲ್ಲಿ ತಾಜ್ಮಹಲ್ ಕಟ್ಟಿಸಿ ಉಡುಗೊರೆಯಾಗಿ ನೀಡಿದ್ದ. ಅದೇ ರೀತಿ ಮಧ್ಯಪ್ರದೇಶದ ಬುರ್ಹಾನ್ ಪುರದಲ್ಲಿ ವ್ಯಕ್ತಿಯೊಬ್ಬರು ಪತ್ನಿ ಮೇಲಿನ ಪ್ರೀತಿಗೆ ತಾಜ್ಮಹಲ್ ರೀತಿಯ ಮನೆಯನ್ನು ಕಟ್ಟಿಸಿ ಗಿಫ್ಟ್ ನೀಡಿದ್ದಾರೆ.
ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ಆನಂದ್ ಪ್ರಕಾಶ್ ಚೌಕ್ಸೆ ತನ್ನ ಪತ್ನಿ ಮಂಜುಷಾ ಚೌಕ್ಸೆ ಗೆ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಉಡುಗೊರೆಯಾಗಿ ನೀಡಿದ್ದಾರೆ. ಈ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸುಮಾರು 3 ವರ್ಷಗಳ ಅವಧಿಯಲ್ಲಿ ಈ ಮನೆ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಮಹಡಿಗಳನ್ನು ಹೊಂದಿದೆ. ಮನೆಯ ನೆಲವನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಕೆಳಮಹಡಿಯಲ್ಲಿ ಎರಡು ಬೆಡ್ ರೂಮ್ ಮತ್ತು ಮೇಲಿನ ಮಹಡಿಯಲ್ಲಿ ಎರಡು ಬೆಡ್ ರೂಮ್ಗಳಿವೆ. ಅಲ್ಲದೇ ಗ್ರಂಥಾಲಯ ಹಾಗೂ ಧ್ಯಾನದ ಕೊಠಡಿಗಳೂ ಈ ಮನೆಯಲ್ಲಿವೆ. ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಿದ್ದು, ಇದು ತಾಜ್ ಮಹಲ್ ರೀತಿಯೇ ಗೋಪುರ ಹೊಂದಿದೆ.










