ಥಾಯ್ಲೆಂಡ್​​​​​​ನಲ್ಲಿ ಭೀಕರ ಗುಂಡಿನ ದಾಳಿ ; 22 ಮಕ್ಕಳು ಸೇರಿ 34 ಜನರು ಸಾವು…

38
firstsuddi

ಬ್ಯಾಂಕಾಕ್ : ಥಾಯ್ಲೆಂಡ್ ನ ಮಕ್ಕಳ ಡೇ-ಕೇರ್ ಕೇಂದ್ರದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 22 ಮಕ್ಕಳು ಸೇರಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ. ಗುಂಡಿಗೆ ಬಲಿಯಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ನಾಂಗ್ ಬುವಾ ಲ್ಯಾಂಫು ಪ್ರಾಂತ್ಯದ ನಾ ಕ್ಲಾಂಗ್ ಜಿಲ್ಲೆಯಲ್ಲಿ ಈ ಗುಂಡಿನ ದಾಳಿ ನಡೆದಿದೆ. ಡೇ ಕೇರ್ ಸೆಂಟರ್ ನಲ್ಲಿ ಗುಂಡಿನ ದಾಳಿ ನಡೆಸಿದ ದಾಳಿಕೋರ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಅಪರಾಧ ಸ್ಥಳದಿಂದ ಪರಾರಿಯಾದ ಶಂಕಿತ ವ್ಯಕ್ತಿ ಗುಂಡು ಹಾರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಕೆಲವು ದೇಶಗಳಿಗೆ ಹೋಲಿಸಿದರೆ ಥಾಯ್ಲೆಂಡ್ ನಲ್ಲಿ ಬಂದೂಕು ಮಾಲಿಕತ್ವದ ಪ್ರಮಾಣವು ಅಧಿಕವಾಗಿದೆ. ಆದರೆ ಅಧಿಕೃತ ಅಂಕಿಅಂಶಗಳನ್ನು ನೋಡಿದರೆ ಇಲ್ಲಿ ಭಾರೀ ಸಂಖ್ಯೆಯ ಅಕ್ರಮ ಶಸ್ತ್ರಾಸ್ತ್ರಗಳು ಇಲ್ಲ. ಇಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. ಆದರೆ 2020 ರಲ್ಲಿ, ಆಸ್ತಿ ಒಪ್ಪಂದದ ವಿಚಾರವಾಗಿ ಕೋಪಗೊಂಡ ಯೋಧನೊಬ್ಬ ನಾಲ್ಕು ಸ್ಥಳಗಳಲ್ಲಿ ಮನಬಂದಂತೆ ನಡೆಸಿದ ಗುಂಡಿನ ದಾಳಿಯಲ್ಲಿ 29 ಜನರು ಸಾವಿಗೀಡಾಗಿದ್ದು, 57 ಜನರು ಗಾಯಗೊಂಡಿದ್ದರು.