ನಿವೃತ್ತಿ ಎಂಬುದು ಜೀವನದಲ್ಲಿ ಅಂತ್ಯವಲ್ಲ. ಅದು ಮತ್ತೊಂದು ಇನ್ನಿಂಗ್ಸ್ ಇದ್ದಂತೆ: ಡಾ.ಎಂ.ಎಸ್.ಮಣಿ 

3255
ದಂಡು ಪ್ರದೇಶದಲ್ಲಿ ಕನ್ನಡದ ಕಂಪು ಪಸರಿಸಿದ ಕೃಷ್ಣಪ್ಪ ಮೇಷ್ಟ್ರು..
ಕೃಷ್ಣಪ್ಪ ಎಂಬ ಹೆಸರಿಟ್ಟುಕೊಂಡ ಬಹಳ ಜನರನ್ನು ಕಂಡಿರುವೆ. ಅವರುಗಳಲ್ಲಿ ಶ್ರೀಕೃಷ್ಣನಲ್ಲಿರುವ ಒಂದಲ್ಲ ಒಂದು ಗುಣವನ್ನು ಕಾಣಬಹುದು. ಆದರೆ, ಕ್ಲೈವ್ ಲ್ಯಾಂಡ್ ಟೌನ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಪ್ಪ ಇಂತಹದ್ದೊಂದು ವಿಶೇಷಣಕ್ಕೆ ಒಂದು ದಿನವೂ ಒಳಗಾದವರಲ್ಲ. ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ರಾಷ್ಟ್ರ, ರಾಜ್ಯ, ಜಿಲ್ಲಾಮಟ್ಟದ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾದವರು. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಕಟ್ಟಿ ಹಲವು ಬೇಡಿಕೆಗಳಿಗೆ ಶ್ರಮಿಸಿದವರು. ಸ್ವಾತಂತ್ಯ ಪೂರ್ವಕಾಲದ ಕುದರೆ ಲಾಯದಲ್ಲಿದ್ದ ಸರ್ಕಾರಿ ಕ್ಲೈವ್ ಲ್ಯಾಂಡ್ ಟೌನ್ ಶಾಲೆಗೆ ಕೃಷ್ಣಪ್ಪ ಅವರು ಆಧುನಿಕ ಸ್ಪರ್ಷ ನೀಡಿದ್ದಾರೆ. ದಂಡುಪ್ರದೇಶದಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಇದಿಷ್ಟೇ ಅಲ್ಲ, ಇವರು ನನ್ನ ಕನಸುಗಳಿಗೆ ಊರುಗೋಲಾಗಿದ್ದರು. ನನ್ನ ಬದುಕಿನ ದೀವಟಿಗೆಯಾಗಿದ್ದರು. ಇವರ ನಿವೃತ್ತಿ ಅವರ ಕುಟುಂಬ ವರ್ಗಕ್ಕೆ ನೋವಿನಗೆರೆ ಮೂಡಿಸಿತೋ ಇಲ್ಲವೋ ನನ್ನಲ್ಲಂತೂ ನೋವಿನ ಗೆರೆ ಮೂಡಿಸಿದೆ.
ಇಂತಹದ್ದೊಂದು ಆತ್ಮೀಯತೆ ಇದ್ದಿದ್ದರಿಂದಲೇ ಕೃಷ್ಣಪ್ಪ ಅವರ ನಿವೃತ್ತಿಯ ನೆನಪಿನಲ್ಲಿ ನನ್ನನ್ನು ಕರೆಸಿದ್ದರು. ನನ್ನೊಂದಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಸಿದ್ದರಾಜು, ಹಿರಿಯ ಪತ್ರಕರ್ತರುಗಳಾದ ವೆಂಕಟೇಶ್ ಪ್ರಸಾದ್, ಸತೀಶ್, ಮಿಂಚು ಶ್ರೀನಿವಾಸ್ ಕೂಡ ಭಾಗವಹಿಸಿದ್ದರು. ಕೃಷ್ಣಪ್ಪ ಅವರಂತಹ ಪ್ರಾಮಾಣಿಕರ ನಿವೃತ್ತಿಯಿಂದ ಶಿಕ್ಷಣ ಇಲಾಖೆ ನಷ್ಟದತ್ತ ಸಾಗಿದೆ. ಇವರ ನಿವೃತ್ತಿ ಇತಿಹಾಸದ ಪುಟಗಳಲ್ಲಿ ಅರ್ಥಪೂರ್ಣವಾಗಿರಬೇಕು. ಇದರೊಂದಿಗೆ ನನ್ನ ಅಳಿಲು ಸೇವೆ ಕೂಡ ಇರಬೇಕು. ಇವರ 38 ವರ್ಷಗಳ ಕಾಲದ ದಕ್ಷ ಸೇವೆಯನ್ನು ಡಿಡಿಪಿಐ ಜಯರಂಗ, ಬಿಇಓ ಶ್ರೀಮತಿ ಪ್ರಭಾ ಅಲೆಗ್ಸಾಂಡರ್, ಪ್ಯಾಂಟರಿ ಟೌನ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋವಿಂದಪ್ಪ, ವೆಂಕಟೇಶ್ ಮೂರ್ತಿ ಅವರುಗಳು ಗಮನಿಸಿರುವುದನ್ನು ನಿಮ್ಮ ಮುಂದಿಟ್ಟಿರುವೆ. 
ಬಿ.ಬಿ.ಎಂ.ಪಿ. ಉಪಚುನಾವಣೆಯ ಇ.ವಿ.ಎಂ. ಕ್ಲೈವ್ ಲ್ಯಾಂಡ್ ಟೌನ್ ಸರ್ಕಾರಿ ಶಾಲೆಯಲ್ಲಿತ್ತು. ಇನ್ನೂ ಎಣಿಕೆ ನಡೆದಿರಲಿಲ್ಲ. ಶಾಲೆಯ ಸುತ್ತ ಪೊಲೀಸರ ಸರ್ಪಗಾವಲಿತ್ತು. ಆದರೂ ಮುಖ್ಯಶಿಕ್ಷಕ ಕೃಷ್ಣಪ್ಪ ಅವರ ಬೀಳ್ಕೊಡುಗೆ ಸಮಾರಂಭ ನಡೆಸಲು ಅವರ ಸಹದ್ಯೋಗಿಗಳು ತಯಾರಿ ನಡೆಸಿದ್ದರು. ಮೌನವಾಗಿದ್ದ ಪೊಲೀಸರು ಸಮಾರಂಭ ನಡೆಸಲು ತಕರಾರು ಎತ್ತಿಕೂತರು. ಶಿಕ್ಷಕರ ಒತ್ತಾಯ ಹೆಚ್ಚಾದಂತೆ, ಪಕ್ಕದ ಬಿ.ಬಿ.ಎಂ.ಪಿ. ಶಾಲೆಯಲ್ಲಿ ಕಾರ್ಯಕ್ರಮ ನಡೆಸಿಕೊಳ್ಳಲು ಹಸಿರುನಿಶಾನೆ ತೋರಿದರು. ಬಿರು ಬಿಸಿಲಿತ್ತು. ಸೂಟುಧಾರಿ ಕೃಷ್ಣಪ್ಪ ಮದುಮಗನಂತೆ ಲವಲವಿಕೆಯಿಂದ ಇದ್ದರು. ಅವರ ಒಡನಾಡಿಗಳ ಹರ್ಷೋದ್ಗಾರ ಮುಗಿಲು ಮುಟ್ಟುವಂತಿತ್ತು. ಆ ಘಳಿಗೆಯಲ್ಲಿ ಕೃಷ್ಣಪ್ಪ ಅವರ ಮುಖದಲ್ಲೊಂದು ‘ಮೌನದ ಗೆರೆ’ ಇಣುಕಿ ಮಾಯವಾಗುತ್ತಿತ್ತು. ಅದು ತೃಪ್ತಿಯ ಭಾವವೋ ಅಥವಾ ದುಃಖದ ಭಾವವೋ ಎಂದು ಅರಿಯಲಾಗಲಿಲ್ಲ. ಅವರಂದು ಕೃತಜ್ಞಾತಾ ಮಾತುಗಳನ್ನು ನುಡಿಯುತ್ತ, ನಿವೃತ್ತಿಯ ಮಾತುಗಳನ್ನು ಅವರಿಗರಿಯದೆ ಭಾರವಾಗುತ್ತಾ ಸಾಗುತ್ತಿತ್ತು. ಇಂತಹದ್ದೊಂದು ಸೂಕ್ಷ್ಮತೆ ಗಮನಿಸಿದ್ದರಿಂದ ನನಗವರ ಮುಖಭಾವ ದಿಟ್ಟಿಸಿ ನೋಡಲು ಬೇಸರವಾಗಿತ್ತು. ಕಾರಣ, ಕೃಷ್ಣಪ್ಪ ದ್ರೋಣ, ಪರಶುರಾಮರಿಗಿಂತ ವಿಭಿನ್ನವಾದ ವ್ಯಕ್ತಿತ್ವ ಹೊಂದಿದ್ದರು. ಇವರ ಕ್ರಿಯಾಶೀಲ ಮನಸ್ಸು ಎದುರು ಕುಳಿತವರನ್ನು ಪ್ರಭಾವಿಸುತ್ತಿತ್ತು. ಅವರ ಸರಳತೆ, ಸುಳ್ಳಿಲ್ಲದ ಮಾತು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು. 
ಶಿಕ್ಷಕರಾಗಿ ರಾಷ್ಟ್ರಪತಿಗಳಿಂದ ಪದಕ ಪಡೆದಿರುವ ಮುಖ್ಯಶಿಕ್ಷಕ ಕೃಷ್ಣಪ್ಪ ಅವರ ಸೇವೆಯ ಕುರಿತು ನನಗೆ ಅತ್ಯಂತ ಹೆಮ್ಮೆ ಇದೆ. ಈ ಸಂಬಂಧ ಸಾಕ್ಷ್ಯಚಿತ್ರ ಮಾಡಿಸಬೇಕೆಂಬ ಆಸೆಯೂ ಇತ್ತು. ಅದಿನ್ನೂ ನೆರವೇರಿಲ್ಲ. ಇರಲಿ, ನನಗಂದು ಅವರ ಕೈಹಿಡಿದು ಹಸ್ತಲಾಘವ ಮಾಡಲಾಗಲಿಲ್ಲ. ಕಾರಣ, ನಾಳೆಯಿಂದ ಅವರು ನಿವೃತ್ತರೆಂಬುದನ್ನು ನೆನಪಿಸಿಕೊಂಡು ಮೈಮರೆತಿದ್ದೆ. ಕೃಷ್ಣಪ್ಪ ಅವರ ಸೇವೆಯ ಕುರಿತು ಒಂದೆರೆಡು ಮಾತುಗಳನ್ನಾಡಬೇಕೆಂದು ಬಯಸಿದ್ದೆ. 
ಆದರೆ, ಅವರಾಡಿದ ಮಾತುಗಳು ನನ್ನನ್ನು ತೋಯಿಸಿಬಿಟ್ಟಿದ್ದವು. ಹಿಂದಿನ ನೆನಪುಗಳು ಅವರ ಮನಃಪಟಲದಲ್ಲಿ ಹಾದು ಹೋಗುತ್ತಿತ್ತು. ಕಾರ್ಯಕ್ರಮ ಮುಂದುವರೆದಂತೆ, ಬಿ.ಬಿ.ಎಂ.ಪಿ. ಕಾಲೇಜಿನ ಪ್ರಾಂಶುಪಾಲ ಆನಂದ್ ವೇದಿಕೆಯ ಮೇಲೆ ಬಂದು ಕೃಷ್ಣಪ್ಪ ಅವರ ಕೊಡುಗೆಯನ್ನು ಸ್ಮರಿಸಿ, ಹಾಡೊಂದನ್ನು ಹಾಡಿ ಅವ ವ್ಯಕ್ತಿಚಿತ್ರ ಕಟ್ಟಿಕೊಟ್ಟರು. ಕೃಷ್ಣಪ್ಪ ಅವರ ಸೇವಾಗಾಥೆಯನ್ನು ಆಲಿಸಿದವರು ಕೃತಜ್ಞಾತಾಭಾವದಲ್ಲಿ ಮುಳುಗಿದ್ದರು. ಇನ್ನೆಲ್ಲಿ ಅವರು ಭಾವೋದ್ರೇಕಕ್ಕೆ ಒಳಗಾಗುತ್ತಾರೋ, ಎಲ್ಲಿ ಅವರ ಕಣ್ಣಾಲಿಗಳು ತುಂಬಿ ಹೋದಾವೋ ಎಂದು ಹೆದರಿ ಅಲ್ಲಿಂದ ನಿರ್ಗಮಿಸಿದೆವು. ಮನೆ ತಲುಪುವಷ್ಟರಲ್ಲಿ ದುಃಖದ ಕಡಲಲ್ಲಿ ಮುಳುಗಿಬಿಟ್ಟಿದ್ದೆ. 
ಇದಾಗಿ ಎಂಟುದಿನಗಳ ನಂತರ, ಕೃಷ್ಣಪ್ಪ ಅವರಿಗೆ ಕರೆ ಮಾಡಿದ್ದೆ. ಆಗವರು, ಐದು ದಿನಗಳ ಹಿಂದೆ ಮಳೆ ಬಿತ್ತು. ನಿತ್ಯ ಮನೆ ಮಾಳಿಗೆಯ ಮೇಲೆ ಕುಳಿತು ಅಭ್ಯಾಸ. ಹೀಗೆ ಮಾಳಿಗೆಯ ಮೇಲೆ ಕುಳಿತಿದ್ದಾಗ ಮಳೆಯ ಹನಿಯೊಂದು ತಲೆಯ ಮೇಲೆ ದೊಪ್ಪನೆ ಬಿತ್ತು. ತಲೆ ಎತ್ತಿ ಆಗಸದ ಕಡೆ ನೋಡಿದಾಗ ನೆತ್ತಿಯ ಮೇಲೊಂದು ಚಟಾರ್ ಎಂದು ಬಿತ್ತು. ಇವೆರೆಡೂ ಬಹಶಃ ಇಷ್ಟು ಬೇಗ ಏಕೆ ನಿವೃತ್ತಿಯಾದೆ ಎಂದು ಪ್ರಶ್ನಿಸಿದಂತಿತ್ತು. ನನಗೀಗ ಮಳೆಯನ್ನು ನೋಡುವುದೆ ಒಂದು ಮನರಂಜನೆಯಾಗಿದೆ. ನಿವೃತ್ತನಾದರೂ ಎಂದಿನಂತೆ ಆರಕ್ಕೇಳುವುದು ರೂಢಿಯಾಗಿದೆ. ಎದ್ದವನೆ ಮನೆಯ ಹೊರಗಡೆ ಬಂದು ಆಗಸದ ಕಡೆ ಕೈ ಮುಗಿಯುವುದಾಗಿದೆ. ನಂತರ ಕಾಫಿ ಹೀರಿಕೊಂಡು, ಪೇಪರ್ ಓದಿದರಷ್ಟೇ ಸಮಾಧಾನ ಎಂದು ಒಂದೇ ಸಮನೆ ಹೇಳುತ್ತಲೇ ಇದ್ದರು. 
ಮನೆಯ ಹತ್ತಿರ ಇರುವ ಪಾರ್ಕಿನಲ್ಲಿ ಬೆಳಗಿನ ವಾಕಿಂಗ್ ಮಾಡುವೆ. ಮಳೆಗಾಲ, ಚಳಿಗಾಲದಲ್ಲಿ ಮಂಕಿ ಕ್ಯಾಪ್ ಧರಿಸುವೆ. ನನ್ನೊಂದಿಗೆ ವಾಕಿಂಗ್ ಮಾಡುವ ಯುವಕ-ಯುವತಿಯರು ಪಾರ್ಕಿನಿಂದ ಹೊರ ಬೀಳುವವರೆಗೂ ಮೊಬೈಲ್ ಗೆ ಅಂಟಿಕೊಂಡು ಬಿಟ್ಟಿರುತ್ತಾರೆ. ಪಕ್ಕದಲ್ಲಿ ಇನ್ನೊಬ್ಬರು ಕೇಳಿಸಿಕೊಂಡಾರು ಎಂಬ ಕಲ್ಪನೆಯೇ ಇಲ್ಲದೆ, ನಾಲ್ಕು ಗೋಡೆಯ ಮಧ್ಯೆ ಇರಬೇಕಾದ ಘಟನೆಗಳೆಲ್ಲವನ್ನೂ ಜಗಜ್ಜಾಹೀರು ಮಾಡುತ್ತಾರೆ. ನನ್ನ ಧರ್ಮಪತ್ನಿ ಕೂಡ ನನ್ನಂತೆಯೇ ಶಿಕ್ಷಕಿ. ಇಬ್ಬರು ಮಕ್ಕಳು ಕೂಡ ಬೆಳಗ್ಗೆ 8:30 ಕ್ಕೆ ಹೊರಟುಬಿಡುವರು. ಇವರೆಲ್ಲರೂ ಹೊರಟನಂತರ ನಾನು ಏಕಾಂಗಿ. ಆಗ ಸ್ವಲ್ಪ ಬೇಸರ ಸುತ್ತಿಕೊಳ್ಳುತ್ತದೆ. ಆಗ ನನಗೆ ಜೊತೆಯಾಗುವುದು ನನ್ನ ಹೊಂಡಾ ಆಕ್ಟಿವಾ. 
ಕಳೆದ 38 ವರ್ಷಗಳಿಂದ 1:30 ಕ್ಕೆ ಶಾಲೆಯ ಬೆಲ್ಲಿನ ಶಬ್ದ ಕೇಳಿಕೊಂಡು ಅಭ್ಯಾಸ ಆಗಿಬಿಟ್ಟಿದೆ. ಅಂತಹ ಸದ್ದಿಲ್ಲದೆ, ಊಟ ಮಾಡಲು ತುಸು ಕಷ್ಟಕರವಾಗುತ್ತಿದೆ. ಊಟದ ಬಳಿಕ ನಿದ್ದೆಗೆ ಜಾರುತ್ತಿರುವೆ. ಸಂಜೆಯ ಹೊತ್ತಿಗೆ ಮೂರ್ಖರ ಪೆಟ್ಟಿಗೆ ಮುಂದೆ ಕೂತು ಸಮಯ ಕಳೆಯುವೆ. ರಾತ್ರಿ ಊಟ ಮುಗಿಸಿ, ಮುಚ್ಚಿರುವ ಬಾಗಿಲುಗಳನ್ನು ಪರೀಕ್ಷಿಸಿ, ಕುಡಿಯಲು ನೀರಿಟ್ಟುಕೊಂಡು ಮಲಗುವೆ. ನಿದ್ದೆ ಹತ್ತಲಿಲ್ಲ ಎಂದರೆ, ಬೆಳಗಿನ ಪತ್ರಿಕೆ ಅಥವಾ ಪುಸ್ತಕ ಒಂದನ್ನು ಕೈಗೆತ್ತಿಕೊಳ್ಳುವೆ. 
ನಮ್ಮ ಸಂಘದ ಬೈಲಾದಲ್ಲಿ ನಿವೃತ್ತರಾದರೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಅವಕಾಶ ಇದೆ. ಹೀಗಾಗಿ ನಾನು ನಿವೃತ್ತನಾಗಿರುವೆ ಎಂದು ಅನಿಸುತ್ತಿಲ್ಲ. ಕಾರಣ ಸಂಘದ ಬೇಡಿಕೆಗಳ ಪಟ್ಟಿ ಮಾಡಬೇಕು. ಪತ್ರ ಮಾಡಿಸಬೇಕು. ಸರ್ಕಾರದ ಹಂತದಲ್ಲಿ ತಿರುಗಾಡಬೇಕು. ಸಂಘವನ್ನು ಕಟ್ಟಿ ಬೆಳೆಸಬೇಕು. ಒಟ್ಟಾರೆ, ನನ್ನ ನಿವೃತ್ತಿ ಜೀವನವನ್ನು ಅರ್ಥಪೂರ್ಣವಾಗಿ ಕಳೆಯುತ್ತೇನೆ ಎಂದೇಳಿ ಸಮಾಧಾನ ಪಟ್ಟುಕೊಂಡರು. 
ಕೃಷ್ಣಪ್ಪ 38 ವರ್ಷಗಳ ಕಾಲ ಅವಿರತವಾಗಿ ದುಡಿದವರು. ತಮ್ಮ ಸೇವಾವಧಿಯಲ್ಲಿ ಒಮ್ಮೆಯೂ ಶಿಸ್ತುಕ್ರಮಕ್ಕೆ ಒಳಗಾದವರಲ್ಲ. ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿಯೇ ನಿವೃತ್ತಿಯನ್ನು ಕೂಡ ಇವರು ಸ್ವಾಗತಿಸುತ್ತಿರಬೇಕು. ಇವತ್ತಿಗೂ ದುಃಖಿತರಾಗದೆ, ಮಾನಸಿಕವಾಗಿ ಹರ್ಷಚಿತ್ತದಿಂದ ಇದ್ದಾರೆ. ಇವರಂತೆ ಸರ್ಕಾರಿ ನೌಕರರ ಕಥೆ ಇರುವುದಿಲ್ಲ. ಅವರುಗಳೆಂದಿಗೂ ನಿವೃತ್ತಿಯ ದಿನ ಎದುರಿಸಲು ಸಿದ್ಧರಾಗಿರುವುದೇ ಇಲ್ಲ. ಸೇವೆಯ ದಿನಗಳಲ್ಲಿ ನಿವೃತ್ತಿಯ ಬಗ್ಗೆ ಚಿಂತಿಸಿರುವುದೂ ಇಲ್ಲ. ಬಹಳ ಜನ ನಿವೃತ್ತಿಯ ನಂತರದ ಬದುಕಿನ ಬಗ್ಗೆ ಯಾವುದೇ ಯೋಜನೆಯನ್ನು ರೂಪಿಸಿಕೊಂಡಿರುವುದಿಲ್ಲ. ಇಂತಹವರು ಅತ್ಯಂತ ಸಂಕಷ್ಟದಲ್ಲಿ ಬದುಕುತ್ತಾರೆ. ಇನ್ನೂ ಕೆಲವರು ತಮ್ಮಿಂದಲೇ ಶಾಲೆ ನಡೆಯುತ್ತಿತ್ತು. ತಮ್ಮ ನಂತರ ಶಾಲೆ ನಡೆಯುವುದೇ ಇಲ್ಲ ಎಂಬ ಭ್ರಮೆಯಲ್ಲಿರುತ್ತಾರೆ. ಶಾಲೆ ಎಂದ ಮೇಲೆ ಯಾರೇ ನಿವೃತ್ತರಾಲಿ, ವರ್ಗಾವಣೆಯಾಗಲಿ, ಎಂದಿನಂತೆ ಶಾಲೆ ನಡೆಯುತ್ತಲೇ ಇರುತ್ತದೆ. ಇದನ್ನು ಎಲ್ಲಾ ಶಿಕ್ಷಕರು ಅರಿಯಬೇಕು. ಬದುಕಿಗಿಂತ ಉದ್ಯೋಗ ದೊಡ್ಡದು ಎಂದು ತಿಳಿಯಬಾರದು. ನಾವು ನಮ್ಮ ಉದ್ಯೋಗವನ್ನು ಜೀವನದ ಒಂದು ಭಾಗವನ್ನಾಗಿ ನೋಡಬೇಕೇ ಹೊರತು, ಜೀವನವನ್ನಾಗಿ ನೋಡಬಾರದು. ‘ಸರ್ಕಾರಿ ಉದ್ಯೋಗ’ ಎಂದರೆ ದೈವಿಕವಾದದ್ದು ಎಂಬ ಕೆಟ್ಟ ನಂಬಿಕೆ ಹೊಂದಿದವರು ನಮ್ಮಲ್ಲಿ ಅನೇಕರಿದ್ದಾರೆ. ದಶಕದ ಹಿಂದೆ ಒಬ್ಬ ಸರ್ಕಾರಿ ನೌಕರ ಪಡೆಯುವ ವೇತನ ಆಧರಿಸಿ, ಅವನಿಗೆ ಗೌರವ ಕೊಡುತ್ತಿದ್ದರು. ಸರ್ಕಾರಿ ನೌಕರನಿಗಿಂತ ವಿದ್ಯೆ, ಹಣ ಎರಡರಲ್ಲೂ ಮುಂದಿದ್ದರೂ, ಅಂತಹವನಿಗೆ ಹೆಣ್ಣು ಕೊಡಲು ಮೀನಾಮೇಷ ಎಣಿಸಲಾಗುತ್ತಿತ್ತು. ‘ಕನ್ಯಾ ದಾನ’ಕ್ಕೆ ‘ಸರ್ಕಾರಿ ಉದ್ಯೋಗ’ ಇಂದಿಗೂ ಮಾನದಂಡ ಆಗಿದೆ. 
ಗ್ರಾಮೀಣ ಪ್ರದೇಶದ ಸರ್ಕಾರಿ ನೌಕರರದ್ದು ಮತ್ತೊಂದು ಕಥೆ. ಇವರಿಗೆ ಸರ್ಕಾರಿ ಹುದ್ದೆ ಗಿಟ್ಟಿತೆಂದರೆ, ಹೊಲ-ಗದ್ದೆ:ದನ-ಕರು-ಕುರಿ ಎಲ್ಲವನ್ನೂ ಮರೆತುಬಿಡುತ್ತಾರೆ. ಸುಖ ಭೋಗದ ಜೀವನಕ್ಕೆ ಹೊಂದಿಕೊಂಡು ಬಿಟ್ಟಿರುತ್ತಾರೆ. ಇಂತಹವರ ಮಧ್ಯೆಯೂ ನಿವೃತ್ತ ಡಿಡಿಪಿಐ ಎಚ್ ಡಿ ಗೋವಿಂದಯ್ಯ ಅಂತಹವರು ವಿಶಿಷ್ಟವಾಗಿ ಕಾಣಸಿಗುತ್ತಾರೆ. ಇವರು ನಿವೃತ್ತಿಯ ಬಳಿಕ ಎದೆಗುಂದದೆ ಕುಟುಂಬಕ್ಕೆ ಹೆಗಲಾದರು. ಬರಡಾಗಿದ್ದ ಭೂಮಿಯನ್ನು ಹಸನಾಗಿಸಿದರು. ಮಾವು, ತೆಂಗು, ತರಕಾರಿ ಬೆಳೆಯುತ್ತಾ ಮಾದರಿ ರೈತರಾಗಿ ಸುಖ ಕಾಣುತ್ತಿದ್ದಾರೆ. ನಿವೃತ್ತಿಯಾಗಿ ದಶಕ ಸಮೀಪಿಸುತ್ತಿದ್ದರೂ, ಒಂದು ದಿನವೂ ನಿವೃತ್ತಿಯ ನೋವನ್ನು ಅನುಭವಿಸಿಯೇ ಇಲ್ಲ. ಇವರಂತೆಯೇ ನಿವೃತ್ತ ಐಜಿಪಿ ಎಂಕೆ ನಾಗರಾಜ್ ಕೂಡ ನಿವೃತ್ತಿಯ ನೋವಿನ ಸೋಂಕನ್ನು ತಾಕಿಸಿಕೊಂಡೇ ಇಲ್ಲ. ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದು ಬಂದವರಾದರೂ, ಸರಳವಾಗಿ ಬದುಕು ರೂಪಿಸಿಕೊಂಡಿದ್ದಾರೆ. ಇಂದಿಗೂ ಕೆ.ಎಲ್.ಇ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕ್ರಿಯಾಶೀಲ ಮನಸ್ಸು, ಗಳಿಸಿದ ಜ್ಞಾನವನ್ನು ಸಮಾಜಕ್ಕೆ ಮರಳಿಸಬೇಕೆಂದು ಸದಾ ಹಾತೊರೆಯುತ್ತಿರುತ್ತದೆ. ಹೀಗಾಗಿಯೇ ಇವರದ್ದು ಸುಖಮಯ ಜೀವನ. 
ನಿವೃತ್ತಿ ಎಂಬುದು ಜೀವನದಲ್ಲಿ ಅಂತ್ಯವಲ್ಲ. ಅದು ಮತ್ತೊಂದು ಇನ್ನಿಂಗ್ಸ್ ಇದ್ದಂತೆ. ಇದರಲ್ಲಿ ಆಡಲು ಸಿದ್ಧರಾಗಿರಬೇಕು.