ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳ ಹತ್ಯೆ ಮಾಡಿದ್ದಾನೆ. ಪ್ರೇಯಸಿ ಸಾವಿನ ಸುದ್ದಿ ತಿಳಿದು ಆಕೆಯ ಪ್ರೇಮಿಯೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಬೋಡಗುರ್ಕಿ ಗ್ರಾಮದ ಕೀರ್ತಿ (20) ಎಂಬ ಯುವತಿಯನ್ನು ಆಕೆಯ ತಂದೆ ಕೃಷ್ಣಮೂರ್ತಿ (46) ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಇದನ್ನರಿತ ಯುವತಿಯ ಪ್ರಿಯಕರ ಅದೇ ಗ್ರಾಮದ ಗಂಗಾಧರ್ (24) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇವರಿಬ್ಬರೂ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ಒಂದೇ ಗ್ರಾಮದವರಾಗಿದ್ದಾರೆ. ಯುವಕ ದಲಿತ ಪಂಗಡಕ್ಕೆ ಸೇರಿದವನಾಗಿದ್ದ, ಯುವತಿ ಬೇರೆ ಜಾತಿಯವಳಾಗಿದ್ದಳು. ನಿನ್ನೆ ಬೆಳಗ್ಗೆ ಈ ವಿಚಾರವಾಗಿ ಕೀರ್ತಿ ಹಾಗೂ ಆಕೆಯ ತಂದೆ ಕೃಷ್ಣಮೂರ್ತಿಯ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಿನ್ನೆಯೇ ಪ್ರೇಮಿಗಳಿಬ್ಬರ ಅಂತ್ಯಸಂಸ್ಕಾರ ನಡೆದಿದೆ. ಜಾತಿ ವಿಚಾರವಾಗಿ ಪ್ರೇಮಿಗಳು ದಾರುಣ ಅಂತ್ಯ ಕಂಡಿದ್ದಾರೆ.
ಬೋಡಗುರ್ಕಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮಗಳನ್ನು ಉಸಿರು ಗಟ್ಟಿಸಿ ಕೊಂದ ಆರೋಪಿ ತಂದೆ ಕೃಷ್ಣಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.










